ವೈ.ಆರ್‌.ಪುಷ್ಪಜಾ

ಕೊಡಗು | ಬುಡಕಟ್ಟು ಸಂಶೋಧನೆ

ಗ್ರಾಮದ ಮೊದಲ ಸ್ನಾತಕೋತ್ತರ ಪದವೀಧರೆ

 

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಚೆನ್ನಂಗಿ ಗ್ರಾಮದ ವೈ.ಆರ್‌.ಪುಷ್ಪಜಾ ಅವರು ಬುಡಕಟ್ಟು ಜನಾಂಗದ ಯರವ ಸಮುದಾಯದವರು. ಎಂಎಸ್‌ಡಬ್ಲು ಪದವಿ ಪಡೆದ ಅವರು, ಸದ್ಯ ಮೈಸೂರಿನ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 

ಅವರ ತಂದೆ ರಂಗ ಹಾಗೂ ತಾಯಿ ಶಾಂತಿ. 4ನೇ ತರಗತಿಯಲ್ಲಿ ಓದುವಾಗ ಅವರ ತಂದೆ ತೀರಿಕೊಂಡರು. ಇದಕ್ಕೂ ಮೊದಲು ಅವರ ಹೆತ್ತವರು ಜಗಳವಾಡಿ ಬೇರೆ ಬೇರೆಯಾಗಿದ್ದರು. ಹೀಗಾಗಿ ಒಂದನೇ ತರಗತಿಯನ್ನು ಕೊಡಗು ಜಿಲ್ಲೆಯ ಸಿದ್ದಾಪುರ ಬಳಿಯ ಗುಯ್ಯ ಗ್ರಾಮದಲ್ಲಿ ದೊಡ್ಡಪ್ಪನ ಮನೆಯಲ್ಲಿ ಓದಿದರು. 2ನೇ ತರಗತಿಯನ್ನು ಚೆನ್ನಂಗಿಯಲ್ಲಿ, 3ನೇ ತರಗತಿಯಿಂದ ದ್ವಿತೀಯ ಪಿಯುವರೆಗೆ ತಿತಿಮತಿಯ ಆಶ್ರಮ ಶಾಲೆಯಲ್ಲಿ ಓದಿದರು. ಓದುವಾಗಲೇ ಪುಷ್ಪಜಾ ಅವರು ಕಾಫಿ ತೋಟಗಳಿಗೆ ಕೂಲಿಗೆ ಹೋಗುತ್ತಿದ್ದರು. ಶಾಲೆ, ಕಾಲೇಜು ರಜೆ ಇದ್ದಾಗ ಕಾಫಿ ತೋಟಗಳಲ್ಲಿ ದುಡಿದಿದ್ದು ನಿರಂತರ.

 

ನಂತರ ಗೋಣಿಕೊಪ್ಪಲಿನ ಕಾಲೇಜಿನಲ್ಲಿ ಪದವಿ ಪೂರೈಸಿದರು. ಅವರ ತಾಯಿ ಕೇರಳದ ಕಲ್ಲಿಕೋಟೆಯ ಉಜ್ವಲ ಅನಾಥಾಶ್ರಮದಲ್ಲಿ 14 ವರ್ಷಗಳಿಂದ ಅಡುಗೆ ಕೆಲಸ ಮಾಡುತ್ತಿದ್ದಾರೆ. ಹಾಸ್ಟೆಲ್‌ನಲ್ಲಿ ಇದ್ದುಕೊಂಡು ವಿದ್ಯಾರ್ಥಿ ವೇತನದ ಜೊತೆಗೆ, ಅವರ ತಾಯಿ ಕಳಿಸಿದ ದುಡ್ಡಿನಲ್ಲಿ ಪದವಿ ಪಡೆದ ಪುಷ್ಪಜಾ, ನಂತರ ಮಂಗಳೂರಿನ ರೋಶನಿ ಕಾಲೇಜಿನ ಸ್ನಾತಕೋತ್ತರ ಕೇಂದ್ರದಲ್ಲಿ ಎಂಎಸ್‌ಡಬ್ಲು ಪದವಿಯನ್ನು 2019ರಲ್ಲಿ ಪಡೆದರು.

 

ಅವರ ತಂಗಿ ಪ್ರಜಿತಾ ನರ್ಸ್‌ ಆಗಿದ್ದಾರೆ. ‘ನಮ್ಮ ಗ್ರಾಮದಲ್ಲಿ ಸ್ನಾತಕೋತ್ತರ ಪದವಿ ಪಡೆದ ಮೊದಲಿಗಳು ನಾನು ಎಂಬ ಹೆಮ್ಮೆಯಿದೆ. ನಮ್ಮ ಯರವ ಸಮಾಜದವರಿಗಾಗಿ ನೆರವಾಗಬೇಕು ಎನ್ನುವ ಉದ್ದೇಶದಿಂದಲೇ ಎಂಎಸ್‌ಡಬ್ಲು ಓದಲು ಕಾರಣ. ಸಮುದಾಯದವರಿಗೆ ಶಿಕ್ಷಣ ಕೊಡಿಸಲು ಶ್ರಮಿಸುವೆ’ ಎನ್ನುತ್ತಾರೆ ಅವರು.

 

- ಗಣೇಶ ಅಮೀನಗಡ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು