ವಿಶ್ವನಾಥ ಜಿ.ಇಕ್ಕೇರಿ

ಶಿವಮೊಗ್ಗ | ಜನಪದ ಕಲೆ

ಪೋಷಕರ ಕಲೆಗೆ ತಮ್ಮತನದ ರುಜು ಮಾಡಿದ ವಿಶ್ವನಾಥ ಇಕ್ಕೇರಿ

 

ತಂದೆ, ತಾಯಿಯಲ್ಲಿರುವ ಕಲೆಯನ್ನೇ ತಮ್ಮದಾಗಿಸಿಕೊಂಡು, ಚಿಕ್ಕ ವಯಸ್ಸಿನಲ್ಲಿಯೇ ಸಂಗೀತ, ನಾಟಕ, ಯಕ್ಷಗಾನ, ಹಸೆ ಚಿತ್ತಾರದಲ್ಲಿ ಬೆರಗು ಮೂಡಿಸುವ ಸಾಧನೆ ಮಾಡಿದ್ದಾರೆ ವಿಶ್ವನಾಥ ಜಿ.ಇಕ್ಕೇರಿ.

 

ತಾಲ್ಲೂಕಿನ ಹೆಚ್ಚೆ ಗ್ರಾಮದ ವಿಶ್ವನಾಥ ಅವರ ತಂದೆ ಗೋವಿಂದಪ್ಪ ಇಕ್ಕೇರಿ ಸಣ್ಣಾಟ, ದೊಡ್ಡಾಟ ಹಾಗೂ ಡೊಳ್ಳಿನ ಕಲಾವಿದರು. ತಾಯಿ ಕಾಳಮ್ಮ ಸೋಬಾನೆ ಗೀತೆಗಳನ್ನು ಹಾಡುವ ಜೊತೆಗೆ ಹಸೆಚಿತ್ತಾರ, ಭೂಮಣ್ಣಿ ಬುಟ್ಟೆ ಬರೆಯುತ್ತಿದ್ದರು. ಅವರಿಂದ ಪ್ರೇರಣೆಗೊಂಡು ಈ ಕಲೆಗಳಲ್ಲಿ ಆಸಕ್ತಿ ಬೆಳೆಸಿಕೊಂಡ ವಿಶ್ವನಾಥ ಚಿಕ್ಕ ವಯಸ್ಸಿನಲ್ಲೇ ಯಕ್ಷಗಾನದತ್ತ ಒಲವು ಬೆಳೆಸಿಕೊಂಡರು.

 

2013ರಲ್ಲಿ ಬೆಂಗಳೂರಿನಲ್ಲಿ ನಡೆದ ಜಾನಪದ ಹಬ್ಬದಲ್ಲಿ ಹೆಚ್ಚೆ ಗ್ರಾಮದ 10 ಮಹಿಳಾ ಕಲಾವಿದರ ಜತೆ ಭಾಗವಹಿಸಿ ಸೋಬಾನೆ, ಸಮೂಹ ಗಾಯನ, ಲಾವಣಿಗಳನ್ನು ಹಾಡಿದ್ದಾರೆ. 2015ರಲ್ಲಿ ಚೆನ್ನೈನಲ್ಲಿ ನಡೆದ ದಕ್ಷಿಣ ಚಿತ್ರ ಕಾರ್ಯಾಗಾರದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಸ್ವತಃ ತಾವೇ ಸಿದ್ಧಪಡಿಸಿದ ಬಿದಿರಿನ ಚಾಪೆ ಮೇಲೆ ಕೆಮ್ಮಣ್ಣು ಹಾಗೂ ಜೇಡಿ ಮಣ್ಣಿನಿಂದ ಪುಂಡಿ ನಾರಿನ ಬ್ರಷ್ ಬಳಸಿ, ನೈಸರ್ಗಿಕ ಹಸೆಚಿತ್ತಾರ ಬಿಡಿಸಿ ಪ್ರಶಸ್ತಿ ಪಡೆದಿದ್ದಾರೆ. ಕೇಂದ್ರ ಲಲಿತ ಕಲಾ ಅಕಾಡೆಮೆ ಚೆನ್ನೈನಲ್ಲಿ ಹಮ್ಮಿಕೊಂಡಿದ್ದ ಪ್ರಾದೇಶಿಕ ಕಲೆಗಳ ಪ್ರದರ್ಶನ ಹಾಗೂ ಸ್ಪರ್ಧೆಯಲ್ಲೂ ಪ್ರಶಸ್ತಿ ಪಡೆದಿದ್ದಾರೆ.

 

ನಾಟಕ ಹಾಗೂ ಯಕ್ಷಗಾನದಲ್ಲಿ ತಮ್ಮದೇ ಹೆಜ್ಜೆ ಗುರುತು ಮೂಡಿಸಿರುವ ಅವರು, ಆಧುನಿಕತೆಗೆ ಮಾರುಹೋಗಿರುವ ಯುವಕರಿಗೆ ಮಾದರಿ. ಪ್ರಾದೇಶಿಕ ಕಲೆಗಳನ್ನು ಉಳಿಸಿ, ಬೆಳೆಸಬೇಕು ಎನ್ನುವುದು ಅವರ ಆಶಯ.

 

- ಟಿ.ರಾಘವೇಂದ್ರ, ಸೊರಬ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು