ವಿಶ್ವನಾಥ ಭಾಸ್ಕರ ಗಾಣಿಗ

ಕುಂದಾಪುರ | ಪವರ್‌ ಲಿಫ್ಟಿಂಗ್‌

ಅಂತರಾಷ್ಟ್ರೀಯ ಮಟ್ಟದ ಪವರ್‌ ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ದಾಖಲೆ


 

ಪ್ರತಿಯೊಬ್ಬ ಸಾಧಕನ ಸಾಧನೆಯ ಪರದೆಯ ಹಿಂದೆ ನೋವಿನ ಹಾಗೂ ಸ್ಪೂರ್ತಿಯ ಕಥೆಗಳಿರುತ್ತದೆ. ಅಂತರಾಷ್ಟ್ರೀಯ ಮಟ್ಟದ ಪವರ್‌ ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ದಾಖಲೆಯನ್ನು ಬರೆದು ಚಿನ್ನದ ಗಳಿಸಿ, ರಾಜ್ಯೋತ್ಸವ ಪ್ರಶಸ್ತಿಯನ್ನು ಗಳಿಸಿರುವ ಕುಂದಾಪುರ ಸಮೀಪದ ದೇವಲ್ಕುಂದ ಗ್ರಾಮದ ಬಾಳಿಕೆರೆಯ ವಿಶ್ವನಾಥ ಗಾಣಿಗರ ಬದುಕಿನ ಯಶೋಗಾಥೆಯಲ್ಲಿಯೂ ಇಂತಹುದೆ ಸಂಗತಿಗಳಿವೆ.

 

2018 ನೇ ಮಾ.3 ರಂದು ಊರಿಗೆ ತೆರಳಲೆಂದು ಬೆಂಗಳೂರಿನಿಂದ ವೋಲ್ವಾ ಬಸ್ಸು ಏರಿದ್ದರು. ಮಂಗಳೂರಿನ ಸಮೀಪದ ಬೈಕಂಪಾಡಿಯ ಬಳಿಯಲ್ಲಿ ಅವರಿದ್ದ ಬಸ್ಸಿಗೆ ಕ್ರೇನ್‌ವೊಂದು ಡಿಕ್ಕಿ ಹೊಡೆದಿತ್ತು. ಕಿಟಕಿಯ ಬಳಿಯಲ್ಲಿ ಕುಳಿತಿದ್ದ ವಿಶ್ವನಾಥರಿಗೆ ಆ ವೇಳೆ ಉಂಟಾದ ಆಘಾತದಿಂದಾಗಿ ಕಿವಿ ತಮಟೆಯೇ ಒಡೆದು ಹೋಗಿತ್ತು. ಬರೊಬ್ಬರಿ 6 ದಿನಗಳ ಕಾಲ ಹೊರ ಜಗತ್ತಿನ ಪರಿವೆ ಇಲ್ಲದೆ ಕೋಮ ಸ್ಥಿತಿಯಲ್ಲಿ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದ ಅವರು ಚೇತರಿಸಿಕೊಂಡು ಮತ್ತೆ ಮರಳಿ ತನ್ನ ಆಯ್ಕೆಯ ಪವರ್‌ ಲಿಫ್ಟಿಂಗ್‌ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ದಾಖಲೆ ಬರೆಯುತ್ತಾರೆ ಎಂದರೆ ಅದು ಛಲವಲ್ಲದೆ ಇನ್ನೇನು ಆಗಲು ಸಾಧ್ಯ ?

 

ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ದೇವಲ್ಕುಂದ ಗ್ರಾಮದ ಬಾಳಿಕೆರೆಯ ಭಾಸ್ಕರ ಗಾಣಿಗ ಹಾಗೂ ಪದ್ಮಾವತಿ ಗಾಣಿಗ ದಂಪತಿಗಳ ಪುತ್ರರಾಗಿರುವ ವಿಶ್ವನಾಥ ಭಾಸ್ಕರ ಗಾಣಿಗ ಕುಂದಾಪುರದಲ್ಲಿ ಬಿಸಿಎ ಪದವಿ ಶಿಕ್ಷಣ ಪಡೆದುಕೊಂಡ ಬಳಿಕ ಬೆಂಗಳೂರಿನ ಜೈನ್‌ ಕಾಲೇಜಿನಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದು, ಪ್ರಸ್ತುತ ಬೆಂಗಳೂರಿನ ಜಿ.ಟಿ ನೆಕ್ಸ್‌ಸ್‌ ಸಾಫ್ಟ್‌ವೇರ್‌ ಕಂಪೆನಿಯಲ್ಲಿ ಸಿಸ್ಟಮ್‌ ಇಂಜಿನಿಯರ್‌ ಆಗಿ ಉದ್ಯೋಗಿಯಾಗಿದ್ದಾರೆ.

 

ಸಣ್ಣ ವಯಸ್ಸಿನಿಂದಲೇ ಏನಾದರೂ ಒಂದು ಸಾಧನೆ ಮಾಡಬೇಕು ಎನ್ನುವ ಕನಸುಗಳನ್ನು ಕಾಣುತ್ತಿದ್ದ ವಿಶ್ವನಾಥರಿಗೆ ಪವರ್‌ ಲಿಫ್ಟಿಂಗ್‌ ಕ್ಷೇತ್ರದ ಸಾಧನೆಗೆ ಸ್ಪೂರ್ತಿ ದೊರೆಕಿದ್ದು ಕುಂದಾಪುರದ ಭಂಡಾರ್‌ಕಾರ್ಸ್‌ ಕಾಲೇಜಿನಲ್ಲಿ. ಪ್ರಶಾಂತ ಶೇರಿಗಾರ ಅವರ ಗರಡಿಯಲ್ಲಿ ಪವರ್ ಲಿಫ್ಟಿಂಗ್‌ ಕ್ಷೇತ್ರದ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದ ಅವರು ಮುಂದೆ ಬೆಂಗಳೂರು ಹಾಗೂ ಪುಣೆಯಲ್ಲಿ ತರಬೇತಿ ಪಡೆದುಕೊಂಡು ಸಮರ್ಥ ಸ್ವರ್ಧಾಳುವಾಗಿ ಸಿದ್ದಗೊಂಡಿದ್ದರು.

 

ಕಾಲೇಜು ಜೀವನದಿಂದಲೇ ಸ್ಪರ್ಧಾಭ್ಯಾಸಗಳನ್ನು ರೂಢಿಸಿಕೊಂಡಿದ್ದ ಅವರು, ವಿಶ್ವ ವಿದ್ಯಾಲಯ ಮಟ್ಟದಲ್ಲಿ ಚಾಂಪಿಯನ್‌ ಪಟ್ಟ ಗೆದ್ದಿದ್ದರು. ತಮಿಳುನಾಡಿನಲ್ಲಿ ನಡೆದಿದ್ದ ರಾಷ್ಟ್ರೀಯ ಜ್ಯೂನಿಯರ್‌ ಚಾಂಪಿಯನ್‌ಶಿಪ್‌ನಲ್ಲಿ 287 ಕೆ.ಜಿ ಭಾರ ಎತ್ತುವ ಮೂಲಕ ನೂತನ ರಾಷ್ಟ್ರೀಯ ದಾಖಲೆ ಬರೆದಿದ್ದ ಅವರು ನಂತರದ ದಿನಗಳಲ್ಲಿ ಸಾಧನೆ ಮೆಟ್ಟಿಲುಗಳನ್ನು ಏರುತ್ತಲೇ ಇದ್ದಾರೆ. 2017 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಕಾಮನ್‌ ವೆಲ್ತ್‌ ಗೇಮ್ಸ್‌ನಲ್ಲಿ 1 ಚಿನ್ನ ಹಾಗೂ 1 ಬೆಳ್ಳಿ ಪದಕ. ಏಶ್ಯನ್‌ ಗೇಮ್ಸ್‌ನಲ್ಲಿ 1 ಚಿನ್ನದ ಪದಕ. ಬೆಂಗಳೂರಿನಲ್ಲಿ ನಡೆದಿದ್ದ ಸೀನಿಯರ್‌ ರಾಷ್ಟ್ರೀಯ ಪವರ್‌ ಲಿಫ್ಟಿಂಗ್‌ ಸ್ಪರ್ಧೆಯ 83 ಕೆ.ಜಿ ಪುರುಷರ ವಿಭಾಗದಲ್ಲಿ ಚಿನ್ನದ ಪದಕ. ಕೇರಳದ ಅಲೆಪ್ಪಿಯಲ್ಲಿ ನಡೆದಿದ್ದ ಏಶ್ಯನ್‌ ಕ್ಲಾಸಿಕ್‌ ಪವರ್‌ ಲಿಫ್ಟಿಂಗ್‌ ಚಾಂಪಿಯನ್‌ ಶಿಪ್‌ನಲ್ಲಿ ಚಿನ್ನದ ಪದಕ ಸೇರಿದಂತೆ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

 

ಅಂತರಾಷ್ಟ್ರೀಯ ಪವರ್‌ ಲಿಫ್ಟಿಂಗ್‌ ಕ್ಷೇತ್ರದಲ್ಲಿ ಬಲಿಷ್ಠ ಪುರುಷ ಪ್ರಶಸ್ತಿಯನ್ನು ಪಡೆದುಕೊಂಡಿರುವ ಇವರು ಒಟ್ಟು 7 ಅಂತರಾಷ್ಟ್ರೀಯ ದಾಖಲೆ, 18 ರಾಷ್ಟ್ರೀಯ ಪ್ರಶಸ್ತಿ ಹಾಗೂ 3 ವಯಕ್ತಿಕ ರಾಷ್ಟ್ರೀಯ ದಾಖಲೆಯೊಂದಿಗೆ ಅಂತರಾಷ್ಟ್ರೀಯ ಮಟ್ಟದ 23 ಕ್ಕೂ ಅಧಿಕ ಪದಕಗಳನ್ನು ಗೆದ್ದಿದ್ದಾರೆ.

 

2019 ನೇ ಸೆ.18 ರಂದು ಕೆನಡಾದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಪವರ್‌ ಲಿಫ್ಟಿಂಗ್‌ ಕಾಮನ್‌ ವೆಲ್ತ್‌ ಚಾಂಪಿಯನ್‌ ಶಿಪ್‌ ಸ್ಪರ್ಧೆಗಾಗಿ ಅಂದಾಜು 3 ಲಕ್ಷ ರೂ. ಸಾಲ ಮಾಡಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅವರು, ಡೆಡ್‌ಲಿಫ್ಟ್‌ನಲ್ಲಿ 327.5 ಕೆ.ಜಿ ಭಾರ ಎತ್ತಿ 2011 ರಲ್ಲಿ ಇಂಗ್ಲೆಂಡಿನ ಸ್ಟೀಫನ್‌ 315 ಕೆ.ಜಿ ಭಾರ ಎತ್ತಿ ನಿರ್ಮಿಸಿದ್ದ ದಾಖಲೆಯನ್ನು ಅಳಿಸಿ ಕೂಟದ ಹೊಸ ದಾಖಲೆ ನಿರ್ಮಿಸಿದ್ದಾರೆ. ಸ್ಕ್ಯಾಚ್‌ನಲ್ಲಿ 291.1 ಕೆ.ಜಿ ಹಾಗೂ ಬೆಂಚ್‌ ಪ್ರೆಸ್‌ನಲ್ಲಿ 180 ಕೆ.ಜಿ ಭಾರವೆತ್ತಿ 2 ಬೆಳ್ಳಿ ಪದಕವನ್ನು ಗಳಿಸಿ, ಒಟ್ಟು 802.5 ಕೆ.ಜಿ ಎತ್ತಿದ ಸಾಧನೆಯಲ್ಲಿ ಸಮಗ್ರ ಸಾಧನೆಗಾಗಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ವಿಶ್ವನಾಥ ಭಾಸ್ಕರ್‌ ಗಾಣಿಗ ಅವರು ಪವರ್‌ ಲಿಫ್ಟಿಂಗ್‌ ಕ್ಷೇತ್ರದದಲ್ಲಿ ಸಾಧನೆಗಳನ್ನು ಗಮನಿಸಿ ಕರ್ನಾಟಕ ರಾಜ್ಯ ಸರ್ಕಾರ 2019 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಿ ಪುರಸ್ಕಾರ ನೀಡಿದೆ.

 

ಉತ್ತಮ ಮೈಕಟ್ಟು ಇದ್ದ ಕಾರಣ ಶಾಲೆಯ ರಜಾ ದಿನಗಳಲ್ಲಿ ಭಾರಿ ಗಾತ್ರದ ಮರದ ದಿಮ್ಮಿಗಳನ್ನು ಎತ್ತಿ ಲಾರಿಗೆ ತುಂಬುವ ಲೋಡರ್‌ ಕೆಲಸದಿಂದ ಭಾರಗಳನ್ನು ಎತ್ತುವ ಪವರ್‌ ಲಿಫ್ಟಿಂಗ್‌ ಕ್ಷೇತ್ರದ ಆಸಕ್ತಿಯನ್ನು ಬೆಳೆಸಿಕೊಂಡಿದ್ದ ವಿಶ್ವನಾಥರಿಗೆ ಮರದ ದಿಮ್ಮಿಗಳೇ ಪವರ್ ಲಿಫ್ಡಿಂಗ್‌ ಕ್ಷೇತ್ರದ ಮೊದಲ ಪಾಠ ಶಾಲೆ.

 

ಕ್ರೀಡಾ ಕ್ಷೇತ್ರದ ಇತರ ಕ್ರೀಡೆಗಳಿಗೆ ಸರ್ಕಾರ ನೀಡುವ ಬೆಂಬಲವನ್ನು ಪವರ್‌ ಲಿಫ್ಟಿಂಗ್‌ ಕ್ಷೇತ್ರಕ್ಕೆ ನೀಡುತ್ತಿಲ್ಲ. ಕಠಿಣ ಸಾಧನೆ ಹಾಗೂ ಪರಿಶ್ರಮದ ಈ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ್ದರೂ ಸರ್ಕಾರಿ ಕೆಲಸ ಸಿಗಲಿಲ್ಲ ಎನ್ನುವ ನೋವಿದೆ ಎನ್ನುತ್ತಾರೆ
ವಿಶ್ವನಾಥ ಭಾಸ್ಕರ್‌ ಗಾಣಿಗ. ಅಂತರಾಷ್ಟ್ರೀಯ ಪವರ್‌ ಲಿಫ್ಟರ್‌.

 

- ರಾಜೇಶ್‌ ಕೆ.ಸಿ ಕುಂದಾಪುರ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು