ವಿನಯ ಸುಬ್ರಾಯ ಶೆಟ್ಟಿ

ಕಾರವಾರ | ಪಶು ಸಂಗೋಪನೆ

ಕೆರೆಮನೆಯಲ್ಲಿ ‘ಮಲೆನಾಡು ಗಿಡ್ಡ’ ಗೋಪಾಲಕ

 

‘ಮಲೆನಾಡು ಗಿಡ್ಡ ಹಸುಗಳು ನಮಗೆ ಮನೆ ಮಕ್ಕಳಿದ್ದಂತೆ. ನಮ್ಮ ಮಕ್ಕಳು ಮನೆ ತುಂಬ ಓಡಾಡಿಕೊಂಡು ಇರುವ ರೀತಿಯಲ್ಲೇ ಹಸು, ಕರುಗಳೂ ಜಮೀನಿನಲ್ಲಿವೆ. 65– 70 ಹಸುಗಳಿದ್ದರೂ ನಾವು ಅವುಗಳ ಹಾಲು ಕರೆಯುವುದಿಲ್ಲ. ನಮ್ಮ ಬಳಕೆಗೆ ಅಂಗಡಿಯಿಂದ ತರುತ್ತೇವೆ...’

 

ಮಲೆನಾಡುವ ಗಿಡ್ಡ ಹಸುಗಳ ಬಗ್ಗೆ ಪ್ರೀತಿ ಹೊಂದಿರುವ ವಿನಯ ಸುಬ್ರಾಯ ಶೆಟ್ಟಿ, ಹೊನ್ನಾವರ ತಾಲ್ಲೂಕಿನ ಕೆರೆಮನೆಯ ನಿವಾಸಿ. ಕಲಾವಿಭಾಗದಲ್ಲಿ ಪದವಿ, ಬಿ.ಇಡಿ, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಿದ್ದಾರೆ. ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿ, ಸುದ್ದಿವಾಹಿನಿಯೊಂದರಲ್ಲಿ ವರದಿಗಾರನಾಗಿ ನೌಕರಿ ಸಿಕ್ಕಿದ್ದರೂ ಅದನ್ನು ಒಪ್ಪಿಕೊಳ್ಳಲಿಲ್ಲ.

 

‘ಪ್ರಜಾವಾಣಿ ಯುವ ಸಾಧಕ’ ಪ್ರಶಸ್ತಿಗೆ ಆಯ್ಕೆಯಾಗಿರುವ ಅವರು, ತಮ್ಮ ಸಾಧನೆಯ ಬಗ್ಗೆ ಹೀಗೆ ಹೇಳುತ್ತಾರೆ.

 

‘ನಮ್ಮ ಆರೇಳು ಎಕರೆ ಜಮೀನಿಗೆ ಕಾಂಪೌಂಡ್ ಅಳವಡಿಸಿದ್ದೇವೆ. ಹಸುಗಳು ಅಲ್ಲೇ ಮೇಯುತ್ತಿರುವೆ. ಅವುಗಳ ಹಾಲನ್ನು ಕರುಗಳೇ ಕುಡಿಯುತ್ತವೆ. ಸಣ್ಣ ಕರುಗಳನ್ನು ಮಾತ್ರ ಕಟ್ಟಿ ಹಾಕಿ ದೊಡ್ಡವುಗಳನ್ನು ಹಾಗೇ ಬಿಟ್ಟಿರುತ್ತೇವೆ. ಮೂರು ಹೊತ್ತು ನೀಡುತ್ತೇವೆ. ಬೆಳಿಗ್ಗೆ ತಿಂಡಿ (ಹಿಂಡಿ) ಕೊಡುತ್ತೇವೆ’ ಎನ್ನುತ್ತಾರೆ. 

 

‘ಈ ತಳಿಗಳು ನಮ್ಮ ಜಿಲ್ಲೆಯವು. ಅವುಗಳಿಗೆ ರೋಗ ನಿರೋಧಕ ಶಕ್ತಿಯೂ ಹೆಚ್ಚು. ಸಾವಯವ ಕೃಷಿಗೆ ಇವುಗಳ ಸೆಗಣಿ, ಮೂತ್ರ ಒಳ್ಳೆಯದು. ನಮ್ಮ ನಾಲ್ಕು ಎಕರೆ ಅಡಿಕೆ ತೋಟಕ್ಕೆ ಸೆಗಣಿ ಗೊಬ್ಬರವನ್ನೇ ಬಳಸುತ್ತೇವೆ. ತೆಂಗು, ಜಾಯಿಕಾಯಿ ಹಾಗೂ ಕಾಳುಮೆಣಸು ಕೃಷಿಯೂ ಇದೆ’ ಎಂದು ವಿನಯ ವಿವರಿಸುತ್ತಾರೆ.

 

‘ತಂದೆ ಸುಬ್ರಾಯ ಪರಮೇಶ್ವರ ಶೆಟ್ಟಿ ಕೃಷಿ ಮಾಡುತ್ತಿದ್ದರು. ಅಮ್ಮ ಶಶಿರೇಖಾ ಅವರಿಗೆ ನೆರವಾಗುತ್ತಿದ್ದರು. ನಾನು ಅದನ್ನು ಮುಂದುವರಿಸಿದ್ದೇನೆ. ಸ್ವಾವಲಂಬಿ ಜೀವನ ಇದರಿಂದ ಸಾಧ್ಯವಾಗಿದೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ.
 

- ಸದಾಶಿವ ಎಂ.ಎಸ್

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು