ವಿಕಾಸ್‌ ಪಾಟೀಲ

ಹುಬ್ಬಳ್ಳಿ | ವನ್ಯಜೀವಿ ಛಾಯಾಗ್ರಾಹಕ

ವನ್ಯಲೋಕದಲ್ಲಿ 'ವಿಕಾಸ' ಪ್ರತಿಬಿಂಬ

 

ಧಾರವಾಡ–ದಾಂಡೇಲಿ ಮಾರ್ಗದ ಕಾಡಂಚಿನ ಗ್ರಾಮ ಮಾವಿನಕೊಪ್ಪಕ್ಕೆ ಆಹಾರ ಅರಸಿ ಚುಕ್ಕಿ ಜಿಂಕೆಯೊಂದು ಬಂದಿತ್ತು. ಊರಿನ ಎರಡು ಬೀದಿ ನಾಯಿಗಳು ಅದರ ಬೆನ್ನಟ್ಟಿ, ಮೈಮೇಲೆ ಎರಗಿದವು. ಇನ್ನೇನು ಅದರ ಕಥೆ ಮುಗಿಯಿತು ಎನ್ನುವಷ್ಟರಲ್ಲಿ ಸ್ಥಳೀಯರು, ನಾಯಿಗಳನ್ನು ಓಡಿಸಿ ಜಿಂಕೆಯ ಜೀವ ಉಳಿಸಿದರು.

 

ಈ ಎಲ್ಲಾ ದೃಶ್ಯಗಳು ವನ್ಯಜೀವಿ ಛಾಯಾಗ್ರಾಹಕ ವಿಕಾಸ ಪಾಟೀಲ ಅವರ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಮನುಷ್ಯ ಮತ್ತು ವನ್ಯಜೀವಿ ಸಂಘರ್ಷಕ್ಕೆ ದ್ಯೋತಕವಾಗಿದ್ದ ಆ ಚಿತ್ರ, ಕನ್ಸರ್ವೇಷನ್ ಇಂಡಿಯಾ ವೆಬ್‌ಸೈಟ್‌ ಮತ್ತು ಬಿಬಿಸಿ ವರ್ಲ್ಡ್ ನ್ಯೂಸ್‌ನಲ್ಲಿ ಪ್ರಸಾರಗೊಂಡು ಸಂಚಲನ ಮೂಡಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಕಾಡುಪ್ರಾಣಿಗಳ ರಕ್ಷಣೆಗಾಗಿ ‘ವಿಶೇಷ ರಕ್ಷಣಾ ಪಡೆ’ ರಚಿಸಬೇಕೆಂಬ ಕೂಗು ಕೇಳಿ ಬರಲು ಕಾರಣವಾಯಿತು.

 

ಹುಬ್ಬಳ್ಳಿಯವರಾದ ವಿಕಾಸ ಪಾಟೀಲ, ತಮ್ಮ ಬಾಲ್ಯದ ದಿನಗಳನ್ನು ಕಳೆದಿದ್ದು ಮಡಿಕೇರಿಯಲ್ಲಿ. ಪ್ರಕೃತಿ ಮತ್ತು ವನ್ಯಜೀವಿಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಅವರಿಗೆ, ತಪಸ್ಸಿಗೆ ಸಮವಾದ ವನ್ಯಜೀವಿ ಛಾಯಾಗ್ರಹಣ ಅಚ್ಚುಮೆಚ್ಚು. ಅದರಲ್ಲೇ ಏನಾದರೂ ಸಾಧಿಸ ಬೇಕೆಂದು ಪಣ ತೊಟ್ಟಿರುವ ಅವರು, ಬಿಡುವಿನ ವೇಳೆಯಲ್ಲಿ ಅರಣ್ಯ ಹಾಗೂ ವನ್ಯಜೀವಿ ಧಾಮಗಳ ಸಂಚಾರಿ. ಅವರು ತೆಗೆಯುವ ರೋಚಕ ಹಾಗೂ ಕೌತುಕ ಚಿತ್ರಗಳು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿವೆ. ವನ್ಯಜೀವಿಗಳ ರಕ್ಷಣೆಯ ಮಹತ್ವ ಸಾರಿ ಹೇಳುತ್ತಿವೆ.

 

- ಸಿದ್ದು ಆರ್‌.ಜಿ. ಹಳ್ಳಿ
 

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು