ರಾಯಚೂರು | ಕ್ರೀಡೆ
ಜನವರಿ ಎರಡನೇ ವಾರದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 19 ವರ್ಷದೊಳಗಿನವರ ಐಸಿಸಿ ವಿಶ್ವಕಪ್‌ಗೆ ರಾಯಚೂರಿನ ವಿದ್ಯಾಧರ ಪಾಟೀಲ ಆಯ್ಕೆ ಆಗುವ ಮೂಲಕ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಮ್ಮೆ ತಂದಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಿಂದ ಎರಡೂವರೆ ದಶಕದ ಹಿಂದೆ ಕೆ.ಟಿ.ಯರೇಗೌಡ ಅವರು ರಾಜ್ಯ ರಣಜಿ ತಂಡಕ್ಕೆ ಆಯ್ಕೆ ಆಗಿದ್ದರು. ಈ ಭಾಗದಿಂದ ಭಾರತ ತಂಡಕ್ಕೆ ಆಯ್ಕೆಯಾಗಿರುವ ಮೊದಲ ಕ್ರಿಕೆಟಿಗ ವಿದ್ಯಾಧರ ಪಾಟೀಲ.
ಕಠಿಣ ಪರಿಶ್ರಮ ಹಾಗೂ ಸಾಧನೆಯ ತುಡಿತ ಅವರನ್ನು ಭಾರತ ಯುವ ತಂಡದವರೆಗೂ ತಂದು ನಿಲ್ಲಿಸಿದೆ. ಜುಲೈನಲ್ಲಿ ನಡೆದ ಭಾರತ, ಇಂಗ್ಲೆಂಡ್, ಬಾಂಗ್ಲಾದೇಶ ತಂಡಗಳ ನಡುವಿನ ತ್ರಿಕೋನ ಸರಣಿಗೂ ಇವರು ಆಯ್ಕೆ ಆಗಿದ್ದರು.
ಮಧ್ಯಮ ವೇಗಿಯಾಗಿರುವ ಇವರು ರಾಯಚೂರು ಇಲೆವೆನ್ ಪರವಾಗಿಯೂ ಆಡುತ್ತಾರೆ. ವೆಂಕಟರೆಡ್ಡಿ ಇವರ ಕೋಚ್. ಕೆಎಸ್‌ಸಿಎ ರಾಯಚೂರು ವಲಯದ ಮೊದಲ ಡಿವಿಷನ್ ಟೂರ್ನಿಯಲ್ಲಿಯೂ ಅವರು ಉತ್ತಮ ಸಾಧನೆ ಹೊಂದಿದ್ದಾರೆ.
ವಿದ್ಯಾಧರ ಪಾಟೀಲ ಅವರ ತಂದೆ ಸೋಮಶೇಖರಗೌಡ ಜಲಮಂಡಳಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ತಾಯಿ ಕವಿತಾ ಗೃಹಿಣಿ.
‘ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ನಮ್ಮ ತಂಡ ವಿಶ್ವಕಪ್ ಗೆಲ್ಲಲು ಕೊಡುಗೆ ನೀಡಬೇಕು ಎಂಬುದು ನನ್ನ ಗುರಿ. ಆ ನಿಟ್ಟಿನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದೇನೆ’ ಎನ್ನುತ್ತಾರೆ ವಿದ್ಯಾಧರ ಪಾಟೀಲ.
-ಸತೀಶ ಬಿ.