ಕೋಲಾರ | ಪ್ಯಾರಾ ಅಥ್ಲೆಟಿಕ್ಸ್
ಚಿಕ್ಕಂದಿನಲ್ಲೇ ಪೋಲಿಯೊದಿಂದ ಎಡಗಾಲು ಹಾಗೂ ಬೆನ್ನು ಹುರಿ ಸಮಸ್ಯೆಗೆ ತುತ್ತಾದ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಬೈರಗಾನಹಳ್ಳಿಯ ಅಂಗವಿಕಲ ಕ್ರೀಡಾಪಟು ವಿ.ಅನಿತಾ ಅಂಗವೈಕಲ್ಯ ಮೆಟ್ಟಿ ನಿಂತು ಸಾಧನೆ ಮಾಡಿದವರು.
ಬೈರಗಾನಹಳ್ಳಿಯ ವೆಂಕಟರವಣಪ್ಪ ಮತ್ತು ರತ್ನಮ್ಮ ದಂಪತಿಯ ಮಗಳಾದ ಅನಿತಾ ಅಂಗವೈಕಲ್ಯವನ್ನು ಸವಾಲಾಗಿ ಸ್ವೀಕರಿಸಿ ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಸಾಧನೆಯು ಇಡೀ ಜಗತ್ತು ಇವರತ್ತ ತಿರುಗಿ ನೋಡುವಂತೆ ಮಾಡಿದೆ. ಓದಿನ ಜತೆ ಜತೆಗೆ ಕ್ರೀಡಾ ಪಯಣ ಮುಂದುವರಿಸಿದ ಗಟ್ಟಿಗಿತ್ತಿ ಅನಿತಾ ಗ್ರಾಮದ ಹೆಮ್ಮೆಯ ಕುವರಿ.
ಎಡಗಾಲಿನ ಸ್ವಾಧೀನ ಕಳೆದುಕೊಂಡರೂ ಆತ್ಮವಿಶ್ವಾಸ ಕಳೆದುಕೊಳ್ಳದ ಇವರ ಸಕಾರಾತ್ಮಕ ಚಿಂತನೆಯು ಬದುಕಿನ ದಿಕ್ಕನ್ನೇ ಬದಲಿಸಿತು. 17 ವರ್ಷದವರಿದ್ದಾಗಲೇ ಕ್ರೀಡೆಯತ್ತ ಮುಖ ಮಾಡಿದ ಇವರು ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಅಂಗವಿಕಲರ ಅಥ್ಲೆಟಿಕ್ಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಸುಮಾರು 108 ಪದಕ ಮುಡಿಗೇರಿಸಿಕೊಂಡಿದ್ದಾರೆ.
ಗುಂಡು ಎಸೆತ (ಶಾಟ್ ಪುಟ್), ತಟ್ಟೆ ಎಸೆತ (ಡಿಸ್ಕಸ್ ಥ್ರೋ), ಕೇರಂ, ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ 30 ಚಿನ್ನದ ಪದಕ, 42 ಬೆಳ್ಳಿ ಪದಕ ಹಾಗೂ 36 ಕಂಚಿನ ಪದಕ ಗೆದ್ದಿರುವ ಇವರು ದೇಶ ವಿದೇಶದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಅಂಗವೈಕಲ್ಯವು ಸಮಸ್ಯೆಯೆಂಬ ಕೀಳರಿಮೆ ಬೆಳೆಸಿಕೊಂಡು ಜೀವನವಿಡೀ ಮರುಕ ಪಡುವವರಿಗೆ ಇವರ ಸಾಧನೆ ಅನುಕರಣೀಯ.
-ಜೆ.ಆರ್.ಗಿರೀಶ್