ಸಿ.ಎಚ್.ಉಮೇಶ್

ದಾವಣಗೆರೆ | ಜಾನಪದ

ಗ್ರಾಮೀಣ ‘ಜಾನಪದ ಸಿರಿ’

 

ಮಾಯಕೊಂಡ ಸಮೀಪದ ನರಗನಹಳ್ಳಿ ಗ್ರಾಮದಲ್ಲಿ ಆಂಜನೇಯಸ್ವಾಮಿ ಕಾರ್ತಿಕೋತ್ಸವದ ನಿಮಿತ್ತ ಆರ್ಕೆಸ್ಟ್ರಾ ಏರ್ಪಾಡಾಗಿತ್ತು. ಅದಾಗ ತಾನೆ 9ನೇ ತರಗತಿ ಓದುತ್ತಿದ್ದ ಸಿ.ಎಚ್. ಉಮೇಶ್ ಮೈಕ್ ಹಿಡಿದುಕೊಂಡು ‘ಕೃಷ್ಣ ರುಕ್ಮಿಣಿ’ ಚಿತ್ರದ ‘ಕರ್ನಾಟಕದ ಇತಿಹಾಸದಲಿ’ ಹಾಡನ್ನು ಹಾಡಿದರು. ಜಾತ್ರೆಗೆ ಸೇರಿದ್ದ ಜನರೆಲ್ಲಾ ಈ ಹಾಡನ್ನು ಕೇಳಿ ತಲೆದೂಗಿದರು.


ಜನಪದ ಗಾಯಕ ಉಮೇಶ್ ಅವರ ಬದುಕಿಗೆ ತಿರುವು ಬಂದಿದ್ದು ಇಲ್ಲಿಂದ. ಸ್ವಂತ ಗ್ರಾಮ ಚಿನ್ನಸಮುದ್ರದಲ್ಲಿ ಹಬ್ಬಗಳ ಸಂದರ್ಭಗಳಲ್ಲಿ ಹಾಡುತ್ತಿದ್ದ ಉಮೇಶ್‌ ಅವರಿಗೆ ‘ಕೃಷ್ಣ ರುಕ್ಮಿಣಿ’ ಚಿತ್ರದ ಹಾಡನ್ನು ಚಿತ್ರದುರ್ಗದ ಆಕಾಶವಾಣಿಯಲ್ಲಿ ಹಾಡುವ ಅವಕಾಶ ಸಿಕ್ಕಿತು.


ತಮ್ಮ ಕಂಠಸಿರಿಯಿಂದಲೇ ಸುಗಮ ಸಂಗೀತ, ಜನಪದ ಗೀತೆ, ಪರಿಸರ ಗೀತೆ, ಕರೋಕೆ ಹಾಡುಗಳು, ರೈತಗೀತೆಗಳು, ನಾಡಗೀತೆ, ಲಾವಣಿ ಹಾಗೂ ಜಾಗೃತಿ ಗೀತೆಗಳ ಮೂಲಕ ಪ್ರೇಕ್ಷಕರನ್ನು ಹಿಡಿದಿಡುವ ಉಮೇಶ್ ಅವರಿಗೆ ತಂದೆ ಹೇಮ್ಲಾ ನಾಯಕ್ ಅವರೇ ಗುರು. ನಾಟಕದ ಮೇಷ್ಟರಾಗಿದ್ದ ಅವರು ಘಟಂ ಬಾರಿಸುತ್ತಿದ್ದುದನ್ನು ನೋಡಿ ಸಂಗೀತದ ರುಚಿ ಹತ್ತಿಸಿಕೊಂಡರು.


ತಮಿಳುನಾಡು, ಕೇರಳ, ತೆಲಂಗಾಣಗಳಲ್ಲಿ ನಡೆಯುವ ರಾಷ್ಟ್ರೀಯ ಭಾವೈಕ್ಯ ಶಿಬಿರ ಸೇರಿ ಜಿಲ್ಲಾಮಟ್ಟದ ಉತ್ಸವಗಳಲ್ಲಿ ಸಂಗೀತದ ರಸದೌತಣ ಉಣಬಡಿಸಿದರು. ನೆಹರೂ ಯುವ ಕೇಂದ್ರದ ಪ್ರಶಸ್ತಿ, ಗ್ರಾಮೀಣ ಸಿರಿ ಪ್ರಶಸ್ತಿ,  ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆಯ ಪ್ರಶಸ್ತಿಗಳು ಇವರಿಗೆ ಲಭಿಸಿವೆ.


ತುತ್ತಿನ ಚೀಲ ತುಂಬಿಸಿಕೊಳ್ಳಲು ಈಗಲೂ ಕೂಲಿ ಕೆಲಸ ಮಾಡುತ್ತಿದ್ದಾರೆ. 

 

- ಡಿ.ಕೆ. ಬಸವರಾಜು

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು