ತಿಮ್ಮಯ್ಯ ಮಾದಂಡ

ಕೊಡಗು | ರಗ್ಬಿ ಆಟಗಾರ

ರಗ್ಬಿಯಲ್ಲಿ ತಿಮ್ಮಯ್ಯ ಮಾದಂಡ ಮಿಂಚು

 

ಕ್ರಿಕೆಟ್‌, ಹಾಕಿ, ಫುಟ್‌ಬಾಲ್‌, ಕಬಡ್ಡಿ... ಹೀಗೆ ಕ್ರೀಡಾ ಕ್ಷೇತ್ರದಲ್ಲಿ ಕೊಡಗಿನ ಯುವಕರು ಸಾಕಷ್ಟು ಸಾಧನೆ ತೋರಿದ್ದಾರೆ. ಈ ಕ್ರೀಡೆಗಳ ಜೊತೆಗೆ ರಗ್ಬಿ ಆಟದಲ್ಲೂ ಕೊಡಗಿನ ಯುವಕನೊಬ್ಬ ಮಿಂಚುತ್ತಿದ್ದಾರೆ.

 

ಅವರೇ ವಿರಾಜಪೇಟೆಯ ನಿವಾಸಿ ಎಂ.ಎಸ್.ಪೂವಯ್ಯ ಅವರ ಪುತ್ರ ತಿಮ್ಮಯ್ಯ ಮಾದಂಡ. ತಿಮ್ಮಯ್ಯ ಅವರು ದೇಶದ ರಗ್ಬಿ ತಂಡದ ಪ್ರಮುಖ ಆಟಗಾರರಾಗಿದ್ದು, ಜಿಲ್ಲೆಗೂ ಕೀರ್ತಿ ತಂದಿದ್ದಾರೆ.

 

ಬೆಂಗಳೂರಿನ ಸೇಂಟ್‌ ಜೋಸೆಫ್‌ ಸೈನ್ಸ್‌ ಅಂಡ್‌ ಆರ್ಟ್ಸ್‌ ಕಾಲೇಜಿನಲ್ಲಿ ಬಿ.ಎ ವ್ಯಾಸಂಗ ಮಾಡಿರುವ ತಿಮ್ಮಯ್ಯ, ರಗ್ಬಿ ಆಟದಲ್ಲಿ ಸಾಧನೆ ತೋರಿದ್ದಾರೆ. ರಗ್ಬಿಯಲ್ಲದೆ ಅಮೆರಿಕನ್ ಫುಟ್‌ಬಾಲ್ ಆಟಗಾರನಾಗಿ, ತರಬೇತುದಾರನಾಗಿಯೂ ಕಾರ್ಯ ನಿರ್ವಹಣೆ ಮಾಡಿದ್ದ ಹೆಗ್ಗಳಿಕೆ ಅವರದ್ದು.

 

ತಿಮ್ಮಯ್ಯ ಅವರು, 2010ರಲ್ಲಿ ದೆಹಲಿಯಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದರು. ಅದೇ ವರ್ಷ ಚೀನಾದಲ್ಲಿ ನಡೆದ ಏಷ್ಯನ್‌ ಗೇಮ್ಸ್‌ನಲ್ಲಿಯೂ ಪಾಲ್ಗೊಂಡಿದ್ದರು. 2009ರಲ್ಲಿ ಟರ್ಕಿಯಲ್ಲಿ ನಡೆದ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ರಗ್ಬಿ ಆಟವಾಡಿ ತಂಡಕ್ಕೆ ಪ್ರಥಮ ಸ್ಥಾನದೊಂದಿಗೆ ಪ್ರಶಸ್ತಿ ತಂದುಕೊಟ್ಟ ಕೀರ್ತಿ ತಿಮ್ಮಯ್ಯಗೆ ಸಲ್ಲುತ್ತದೆ. 2010ರಲ್ಲಿ ಆಕ್ಲೇಂಡ್, ನ್ಯೂಜಿಲೆಂಡ್‌ನಲ್ಲಿ ನಡೆದ ಪೆಸಿಫಿಕ್ ಚಾಂಪಿಯನ್‌ಷಿಪ್‌ ಟೂರ್ನಿಯಲ್ಲಿ ದ್ವಿತೀಯ ಸ್ಥಾನ, 2008ರಲ್ಲಿ ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆದ ಟೂರ್ನಿಯಲ್ಲಿ ಪ್ರಶಸ್ತಿ ಗಳಿಸಿದ್ದಾರೆ. ದುಬೈ, ಸಿಂಗಪುರ, ಶ್ರೀಲಂಕಾ, ನವದೆಹಲಿಯಲ್ಲಿ ನಡೆದ ರಗ್ಬಿ ಟೂರ್ನಿಯಲ್ಲಿ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ.

 

ಕೊಡಗಿನ ತಿಮ್ಮಯ್ಯ ಬರೀ ರಗ್ಬಿ ಆಟಗಾರರಾಗಿ ಹೆಸರು ಗಳಿಸಿಲ್ಲ. ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್‌ನಲ್ಲಿ ರಗ್ಬಿ ಆಟಗಾರರಿಗೆ ತರಬೇತಿಯನ್ನೂ ನೀಡುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡಿದ್ದಾರೆ.

 

2018–19ನೇ ಸಾಲಿನಲ್ಲಿ ಚೆನ್ನೈ, ಕೊಚ್ಚಿನ್‌ನಲ್ಲಿ ನಡೆದ ಪ್ರೊ ವಾಲಿಬಾಲ್ ಲೀಗ್ ಟೂರ್ನಿ ಮ್ಯಾನೇಜರ್, 2018–19ನೇ ಸಾಲಿನಲ್ಲಿ ಮಂಗಳೂರಿನಲ್ಲಿನಡೆದ ಪ್ರೊ ಬ್ಯಾಡ್ಮಿಂಟನ್ ಲೀಗ್ ಟೂರ್ನಿಯ ಮ್ಯಾನೇಜರ್, 2019ರಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರೊ ಕಬಡ್ಡಿಯ ಮೈದಾನದ ಸಂಚಾಲಕರಾಗಿಯೂ ಕಾರ್ಯ ನಿರ್ವಹಿಸಿದ್ದರು.

 

- ಆದಿತ್ಯ ಕೆ.ಎ.

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು