ಬಿ.ಯು.ತೇಜಸ್ವಿನಿ

ಚಿತ್ರದುರ್ಗ | ನೃತ್ಯ

ಅಪರೂಪದ ನೃತ್ಯ ಕಲಾವಿದೆ; 16 ವರ್ಷಗಳ ಕಲಿಕೆ

 

ಬಾಲ್ಯದಿಂದಲೂ ಭರತನಾಟ್ಯದಲ್ಲಿ ಆಸಕ್ತಿ ಹೊಂದಿ 16 ವರ್ಷಗಳಿಂದಲೂ ಆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಬಿ.ಯು. ತೇಜಸ್ವಿನಿ ನಮ್ಮ ನಡುವಿನ ಅಪರೂಪದ ಸಾಧಕಿ.


ಚಿತ್ರದುರ್ಗ ನಗರದಲ್ಲಿ ಜನಿಸಿದ ಇವರಿಗೆ ಈಗ 20 ವರ್ಷ. ತಂದೆ ಬಿ.ಎಸ್. ಉಮೇಶ್‌ ಆಚಾರ್, ತಾಯಿ ಬಿ.ಕೆ. ಕಲಾವತಿ.


ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನಲ್ಲಿ ಬಿ.ಕಾಂ ದ್ವಿತೀಯ ವರ್ಷ ವ್ಯಾಸಂಗ ಮಾಡುತ್ತಿರುವ ಈ ವಿದ್ಯಾರ್ಥಿನಿ, ಡಾನ್ಸ್‌ ಮಾಸ್ಟರ್ ಚಂದು ಎಂಬುವವರ ಸಹಕಾರದೊಂದಿಗೆ 20ಕ್ಕೂ ಹೆಚ್ಚು ಮಕ್ಕಳಿಗೆ ಪಾಶ್ಚಿಮಾತ್ಯ ನೃತ್ಯ ಕಲಿಸಿಕೊಡುತ್ತಿದ್ದಾರೆ.


ನಾಲ್ಕು ವರ್ಷದ ಬಾಲಕಿಯಾಗಿದ್ದಾಗ ಚಿತ್ರನಟ ಶ್ರೀಧರ್‌ ಅವರ ಭರತನಾಟ್ಯ ನೋಡಿ, ಅವರಿಂದ ಪ್ರೇರಣೆ ಪಡೆದು ಕ್ಷೇತ್ರದಲ್ಲಿ ಆಸಕ್ತಿ ಮೈಗೂಡಿಸಿಕೊಂಡರು. ಕಲಾವಿದೆಯಾದ ನಂದಿನಿ ಶಿವಪ್ರಕಾಶ್‌ ಬಳಿ 10 ವರ್ಷ ಭರತನಾಟ್ಯ ಕಲಿತರು. ಶ್ರೇತಾಭಟ್‌ ಅವರ ಬಳಿ 6 ವರ್ಷಗಳಿಂದ ಕಲಿಯುತ್ತಿದ್ದಾರೆ. ಪಾಶ್ಚಿಮಾತ್ಯ ಶೈಲಿಯ ನೃತ್ಯವನ್ನು ಸಿನಿಮಾದ ಸಹಾಯಕ ಕೊರಿಯೋಗ್ರಾಫರ್ ನಾಗಭೂಷಣ್‌ ಬಳಿ ಕಲಿಯುತ್ತಿದ್ದಾರೆ.


ಕೋಲ್ಕತ್ತದಲ್ಲಿ ನಡೆದ ರಾಷ್ಟ್ರೀಯ ನೃತ್ಯ ಮತ್ತು ಸಂಗೀತ ಹಬ್ಬ, ಬಿಜಾಪುರದಲ್ಲಿ ನಡೆದ ರಾಜ್ಯಮಟ್ಟದ ಭರತನಾಟ್ಯ ಪ್ರದರ್ಶನ, ಮೈಸೂರು ದಸರಾ, ಹಂಪಿ ಉತ್ಸವ, ಚಿತ್ರದುರ್ಗದ ಶರಣ ಸಂಸ್ಕೃತಿ ಉತ್ಸವ, ಮಹಾಶಿವರಾತ್ರಿ ಮಹೋತ್ಸವ, ಶ್ರಾವಣ ಸಮಾರಂಭ, ಚಳ್ಳಕೆರೆಯ ಗಡಿನಾಡು ಉತ್ಸವ ಹೀಗೆ ವಿವಿಧ ಕಾರ್ಯಕ್ರಮಗಳಲ್ಲಿ ಭರತನಾಟ್ಯ ಕಾರ್ಯಕ್ರಮ ನೀಡಿದ್ದಾರೆ.


ಕಲಾ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಮೂರು ವರ್ಷ ಪ್ರಥಮ ಬಹುಮಾನ ಮುಡಿಗೇರಿಸಿಕೊಂಡಿದ್ದಾರೆ. 2012ರಲ್ಲಿ ಅಸಾಧಾರಣ ಬಾಲ ಪ್ರತಿಭೆ ಪ್ರಶಸ್ತಿ ಪಡೆದಿದ್ದಾರೆ.

 

-ಪ್ರಣವಕುಮಾರ್‌ ಕೆ.ಎಸ್‌.

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು