ಟಿ.ನರೇಂದ್ರಬಾಬು

ತುಮಕೂರು | ಶಿಕ್ಷಕ

ಪ್ರೀತಿಯಿಂದ ಕೀರ್ತಿ ಗಳಿಸಿದ ಗುರು 

 

 

ಸಾಹಿತ್ಯದ ಆಸಕ್ತರಾಗಿರುವ ಟಿ.ನರೇಂದ್ರಬಾಬು ಅವರು ವೃತ್ತಿಯಲ್ಲಿ ಶಿಕ್ಷಕರು. ತಾವು ಅಧ್ಯಯನ ಮಾಡಿದ್ದನ್ನು ಮಕ್ಕಳಿಗೆ ಧಾರೆ ಎರೆಯುತ್ತಿದ್ದಾರೆ. ಮಕ್ಕಳಲ್ಲಿನ ಬರವಣಿಗೆ ಪ್ರತಿಭೆಯನ್ನು ಗುರುತಿಸುತ್ತಾರೆ. ಅಂತವರಿಗೆ ಪ್ರೋತ್ಸಾಹ ನೀಡಿ ಬೆಳೆಯಲು ಇರುವ ಅವಕಾಶಗಳನ್ನು ತೋರಿಸಿಕೊಡುತ್ತಿದ್ದಾರೆ.

 

ಇವರು ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಧರ್ಮಪುರದಲ್ಲಿ. ಈಗ ತುಮಕೂರಿನ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 

ಇವರಿಗೆ ಓದು ಎಂಬುದು ನಿತ್ಯದ ಚಟುವಟಿಕೆಗಳ ಅವಿಭಾಜ್ಯ ಅಂಗ, ಹಾಗೆಯೇ ಬರವಣಿಗೆಯು ಸಹ. ಹಾಗಾಗಿ ಇವರ ನೂರಾರು ಲೇಖನಗಳು ಹತ್ತಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅವುಗಳಿಂದ ಜ್ಞಾನ, ಮಾಹಿತಿಯ ಧಾರೆಯೇ ಓದುಗರ ಮನದಂಗಳಕ್ಕೆ ಹರಿದಿದೆ.

 

ವಿವಿಧ ಶಾಲಾ–ಕಾಲೇಜುಗಳಲ್ಲಿ ನಡೆಯುವ ಸ್ಪರ್ಧಾ ಚಟುವಟಿಕೆಗಳಲ್ಲಿ ಭಾಗವಹಿಸಲು ತಮ್ಮ ಶಾಲೆಯ ಮಕ್ಕಳನ್ನು ತಯಾರಿ ಮಾಡುವಲ್ಲಿ ಇವರು ಎತ್ತಿದ ಕೈ. ಇವರ ಮಾರ್ಗದರ್ಶನದಲ್ಲಿ ನೂರಾರು ಮಕ್ಕಳು ಸ್ಪರ್ಧೆಗಳಲ್ಲಿ ಗಳಿಸಿ ಶಾಲೆಗೂ ಗೌರವವನ್ನು ತಂದಿದ್ದಾರೆ.

 

ನರೇಂದ್ರಬಾಬು ಉತ್ತಮ ಮಾತುಗಾರ ಕೂಡ. ಹಾಗಾಗಿ ಶಾಲಾ–ಕಾಲೇಜು ದಿನಗಳಿಂದಲೂ ಆಶುಭಾಷಣ, ಪ್ರಬಂಧ ರಚನೆ, ರಸಪ್ರಶ್ನೆ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಲೇ ಬಂದಿದ್ದಾರೆ. ಆ ಕಲೆಯನ್ನು ತಮ್ಮ ಶಿಷ್ಯವೃಂದಕ್ಕೂ ಕಲಿಸಿ ಕೊಡುತ್ತಿದ್ದಾರೆ. ಮಕ್ಕಳಿಗಾಗಿ ಕವಿತೆ ರಚನೆ ಕಾರ್ಯಾಗಾರ, ಕವಿಗೋಷ್ಠಿಗಳನ್ನು ಆಯೋಜಿಸುತ್ತ ಬಂದಿದ್ದಾರೆ. ಹಾಗಾಗಿ ಈ ಗುರುವನ್ನು ಕಂಡರೆ ವಿದ್ಯಾರ್ಥಿಗಳಿಗೆ ಎಲ್ಲಿಲ್ಲದ ಪ್ರೀತಿಭರಿತ ಗೌರವ.

 

-ಪೀರ್‌ಪಾಷ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು