ಟಿ.ಎಂ. ಅಖಿಲೇಶ್‌

ತುಮಕೂರು | ಸಮಾಜ ಸೇವೆ

‘ಕಣ್ಮುಚ್ಚಾಲೆ’ಯ ಕನಸುಗಾರ

 

 

‘ವಿದ್ಯೆ ಕಡಿಮೆಯಿದ್ದರೂ ನಡತೆ ಶುದ್ಧವಾಗಿರಬೇಕು’ ಎನ್ನುವ ಶಿವಕುಮಾರ ಸ್ವಾಮೀಜಿಯವರ ನುಡಿಯಿಂದ ಪ್ರೇರಿತವಾಗಿರುವ ಟಿ.ಎಂ. ಅಖಿಲೇಶ್‌ ಚಿಣ್ಣರಲ್ಲಿ ಸೃಜನಶೀಲ ಕಲೆಗಳನ್ನು ಬಿತ್ತುವ ಕಾರ್ಯಕ್ಕೆ ಕಂಕಣ ಬದ್ಧರಾಗಿದ್ದಾರೆ.

 

ತುಮಕೂರಿನ ಸಿದ್ಧಗಂಗಾ ಬಡಾವಣೆಯ ನಿವಾಸಿ ಅಖಿಲೇಶ್‌ ಬಿ.ಕಾಂ. ಪದವೀಧರರು. ಸದ್ಯ ಸಂಸ್ಕೃತದಲ್ಲಿ ‘ಶಕ್ತಿ ವಿಶಿಷ್ಟಾದ್ವೈತ’ ವಿಷಯದಲ್ಲಿ ಬಿಎ ವ್ಯಾಸಂಗ ಮಾಡುತ್ತಿದ್ದಾರೆ.

 

ಮಕ್ಕಳ ಸಾಮಾಜಿಕ ಕಾರ್ಯಕ್ರಮಗಳಿಗಾಗಿ ದುಡಿಯುತ್ತಿರುವ ಕಣ್ಮುಚ್ಚಾಲೆ ಗುಂಪಿನಲ್ಲಿ ಸಕ್ರಿಯವಾಗಿರುವ ಇವರು, ಅದರ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 

ಮಕ್ಕಳ ಪ್ರತಿಭೆ ಅನಾವರಣಕ್ಕಾಗಿ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಗಾಳಿಪಟ ಸ್ಪರ್ಧೆ, ಮಕ್ಕಳ ಕವಿಗೋಷ್ಠಿ, ಸಾಹಿತ್ಯ ಗೋಷ್ಠಿ, ಕನ್ನಡ ವ್ಯಾಕರಣ ಕಾರ್ಯಗಾರಗಳನ್ನು ನಿರಂತರವಾಗಿ ಆಯೋಜಿಸುತ್ತಿದ್ದಾರೆ.

 

ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ ಆಯೋಜಿಸಿ ಅವರಿಗೆ ಕಲೆ, ಸಾಹಿತ್ಯ, ಸಂಗೀತದ ಒಲವು ಬಿತ್ತಬೇಕು ಎನ್ನುವುದು ಕಣ್ಮುಚ್ಚಾಲೆಯ ಕನಸು.

 

ಶಿಕ್ಷಣ ವ್ಯವಸ್ಥೆಯಲ್ಲಿ ಪಾಠವನ್ನು ಬೋಧಿಸುವ ವಿಧಾನ ಬದಲಾಗಬೇಕು. ನೈತಿಕತೆಯನ್ನು ಒಳಗೊಂಡ ಗುಣಾತ್ಮಕ ಶಿಕ್ಷಣವನ್ನು ಸೃಜನಶೀಲ ಕಲೆಗಳ ಮೂಲಕ ಕಲಿಸಬೇಕು ಎನ್ನುವುದು ಅವರ ಹಂಬಲ.

 

ನಾಟಕ, ಸಂಗೀತ, ಚಿತ್ರಕಲೆ, ಸಾಹಿತ್ಯ, ರಂಗಭೂಮಿಗಳು ಶಿಕ್ಷಣದ ಅಭಿವ್ಯಕ್ತಿಗಳಾಗಬೇಕು. ಬಾನುಲಿ ಕೇಂದ್ರಗಳಲ್ಲಿ ಮಾಲಿಕೆಗಳಾಗಿ ಪಠ್ಯಗಳು ಬಿತ್ತರವಾಗಬೇಕು. ಅಂತಹ ಶಿಕ್ಷಣ ವಿದ್ಯಾರ್ಥಿಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎನ್ನುವುದು ಇವರ ನಂಬಿಕೆ. 

 

ಚಿಕ್ಕ ವಯಸ್ಸಿನಲ್ಲಿಯೇ ಸಾಮಾಜಿಕ ಕಾರ್ಯಗಳಲ್ಲಿ ನಿರತರಾಗಿರುವ ಅಖಿಲೇಶ್‌ ಅವರು 2016ರಲ್ಲಿ ‘ಸಾಹಿತ್ಯ ಸಿರಿ ಶ್ರೀ’ ಪ್ರಶಸ್ತಿ ಪಡೆದುಕೊಂಡಿದ್ದಾರೆ.

 

-ಅಭಿಲಾಷ ಬಿ.ಸಿ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು