ಸ್ವಸ್ತಿಕ್ ಕನ್ಯಾಡಿ

ಮಂಗಳೂರು | ಸಮಾಜ ಸೇವೆ

ಸಾಮಾಜಿಕ ಕಳಕಳಿಯ ಬಹುಮುಖ ಪ್ರತಿಭೆ

 

ಬೆಳ್ತಂಗಡಿ ತಾಲ್ಲೂಕಿನ ಕಲ್ಮಂಜದ ಸ್ವಸ್ತಿಕ್ ಕನ್ಯಾಡಿ ಬಹುಮುಖ ಪ್ರತಿಭೆ. ತಮ್ಮದೇ ತಂಡ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ  ಛಾಪ ಮೂಡಿಸಿದವರು.

 

ಸ್ವಸ್ತಿಕ್ ಅವರಿಗೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಪ್ರೇರಣೆ. ಕಾಕತಾಳೀಯ ಎಂಬಂತೆ ಇವರೂ ಬಾಲ್ಯದಲ್ಲಿ ತಮ್ಮ ಖರ್ಚುಗಳನ್ನು ನಿಭಾಯಿಸಲು ಪತ್ರಿಕೆ ಹಾಕುತ್ತಿದ್ದರು. ಈಗ ಅದೇ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗುತ್ತಿವೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಳ್ತಂಗಡಿ ತಾಲ್ಲೂಕಿನ ಸ್ವಚ್ಚತಾ ಜಾಗೃತಿ ವೇದಿಕೆ ಮತ್ತು ಜನಜಾಗೃತಿ ವೇದಿಕೆಯ ಸದಸ್ಯರಾಗಿದ್ದು, ಅನೇಕ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದಾರೆ. ಸ್ವಚ್ಚಭಾರತ, ನೇತ್ರದಾನ, ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

 

ಯುವ ಸಂಸತ್ತಿನ ಜಿಲ್ಲಾಮಟ್ಟದ ಪ್ರಶಸ್ತಿ ಪಡೆದು, ರಾಜ್ಯ ಮಟ್ಟದ ಸಂಸತ್‌ನಲ್ಲಿ ಭಾಗವಹಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ‘ಮೋಸ್ಟ್ ಟ್ಯಾಲೆಂಟೆಡ್ ಆ್ಯಂಡ್ ಬೆಸ್ಟ್ ವ್ಯಾಲೆಂಟಿಯರ್’ ಪ್ರಶಸ್ತಿ ಪಡೆದುಕೊಂಡಿದ್ದಾರೆ.

 

ಸ್ವಸ್ತಿಕ್, ನಮ್ಮಟಿವಿ ಹಮ್ಮಿಕೊಂಡಿರುವ ‘ಕುಸಲ್ದ ಒಸರ್ ಸ್ಟಾಂಡ್ ಅಪ್ ಕಾಮಿಡಿ’ ರಿಯಾಲಿಟಿ ಶೋ ಫೈನಲ್ ಪ್ರವೇಶಿಸಿದ್ದಾರೆ. ‘ಕುಸಲ್ದ ಬಿರ್ಸೆರ್’ ನಾಟಕ ತಂಡದ ಮೂಲಕ ಬೀದಿ ನಾಟಕ, ಹಾಸ್ಯ ನಾಟಕಗಳನ್ನು ಬರೆದು ನಿರ್ದೇಶಿಸಿದ್ದಾರೆ. ರಿಯಾಲಿಟಿ ಶೋ ‘ಬಲೆತೆಲಿಪಾಲೆ’ಯಲ್ಲೂ ಪಾಲ್ಗೊಂಡಿದ್ದಾರೆ. 

 

‘ಕೇಶರಾಶಿಯ ಬೆಡಗಿ’, ‘ವೈಷ್ಟವ’ ಮುಂತಾದ ಕಿರು ಚಿತ್ರಗಳಿಗೆ ಸಾಹಿತ್ಯ ಬರೆದಿದ್ದಾರೆ. ಇವರೇ ಬರೆದು ನಿರ್ದೇಶಿಸಿದ ‘ಇನ್ಸ್ಟಾಗ್ರಾಮ್’ ಕಿರುಚಿತ್ರವು ಬಿಡುಗಡೆಯ ಹಂತದಲ್ಲಿದೆ. 30ಕ್ಕೂ ಹೆಚ್ಚು ತುಳು ಪಾಡ್ದನಗಳನ್ನು ಸಂಗ್ರಹಿಸಿದ್ದು, ಪುಸ್ತಕ ರೂಪದಲ್ಲಿ ಪ್ರಕಟಿಸುವ ಇರಾದೆ ಹೊಂದಿದ್ದಾರೆ.  ಪ್ರಸ್ತುತ ಎಸ್.ಡಿ.ಎಂ ಸ್ನಾತಕೋತ್ತರ ಕಾಲೇಜಿನಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಮೊದಲ ವರ್ಷದ ವಿದ್ಯಾರ್ಥಿ.

 

ಯುಪಿಎಸ್‌ಸಿ ಬರೆದು, ಐಎಎಸ್ ಆಗಬೇಕು ಎಂಬುವುದು ಅವರ ಅಪೇಕ್ಷೆ. ತನ್ನದೇ ಆದ ಒಂದು ಕಲಾ ತಂಡ ಕಟ್ಟಿಕೊಳ್ಳಬೇಕು. ಕರಾವಳಿಯಲ್ಲಿ ಭತ್ತದ ಕೃಷಿ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂಬ ಕನಸಿನ ಕಂಗಳು ಅವರದ್ದು.

 

- ಹರ್ಷವರ್ಧನ ಪಿ. ಆರ್

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು