ಸುಷ್ಮಾ ರವಿಕುಮಾರ್‌

ಮೈಸೂರು | ಸಮಾಜ ಸೇವೆ

ಮಾನಸಿಕ ಅಸ್ವಸ್ಥೆಯರ ಪಾಲಿನ ಆಶಾಕಿರಣ

 

ಮಾನಸಿಕ ಅಸ್ವಸ್ಥರು, ನಿರ್ಗತಿಕ ಮಹಿಳೆಯರಿಗೆ ಆಶ್ರಯ ನೀಡಿ, ಅವರ ಪಾಲನೆಯಲ್ಲಿ ತೊಡಗಿರುವ ಸುಷ್ಮಾ ರವಿಕುಮಾರ್‌, ಮೈಸೂರಿನ ಕೂರ್ಗಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ‘ಚಿಗುರು’ ಆಶ್ರಮವನ್ನು ಸ್ಥಾಪಿಸಿದ್ದಾರೆ.

 

2014ರಲ್ಲಿ ಬೆಳವಾಡಿಯ ಚಾಮುಂಡೇಶ್ವರಿನಗರದಲ್ಲಿ ಚಿಗುರು ಆಶ್ರಮವನ್ನು ಸ್ಥಾಪಿಸಲಾಯಿತು. ಆರಂಭದಲ್ಲಿ ಐವರು ಮಹಿಳೆಯರಿಗೆ ಆಶ್ರಯ ನೀಡಲಾಗಿತ್ತು. ಸದ್ಯ, 30 ನಿರ್ಗತಿಕ, ಮಾನಸಿಕ ಅಸ್ವಸ್ಥ ಮಹಿಳೆಯರು ಇಲ್ಲಿ ಆಶ್ರಯ ಪಡೆದಿದ್ದಾರೆ. ಎಲ್ಲರಿಗೂ ಊಟ, ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಲಾಗುತ್ತಿದೆ.

 

28ರ ಹರೆಯದ ಸುಷ್ಮಾ ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ತಾಲ್ಲೂಕಿನ ಮದ್ದಿಕ್ಯಾಚಿಮನಹಳ್ಳಿ ಗ್ರಾಮದವರು. ತಂದೆ ಸತೀಶ್‌ ಕೃಷಿಕ. ತಾಯಿ ಶಶಿಕಲಾ. ಸುಷ್ಮಾ ಅವರಿಗೆ ಕಾಲೇಜು ದಿನಗಳಲ್ಲೇ ನಿರ್ಗತಿಕ ಮಹಿಳೆಯರ ಅಭಿವೃದ್ಧಿಯ ಕನಸನ್ನು ಕಂಡವರು. ಇದಕ್ಕೆ ಎನ್‌ಎಸ್‌ಎಸ್‌ ಶಿಬಿರವೇ ಪ್ರೇರಣೆ ಎನ್ನುತ್ತಾರೆ ಸುಷ್ಮಾ.

 

ಮೈಸೂರಿನ ಮಾನಸಗಂಗೋತ್ರಿಯಲ್ಲಿ ಸಮಾಜ ಕಾರ್ಯದಲ್ಲಿ (ಎಂಎಸ್‌ಡಬ್ಲ್ಯು) ಸ್ನಾತಕೋತ್ತರ ಪದವಿಯನ್ನು 2013ರಲ್ಲಿ ಪೂರೈಸಿದ್ದ ಅವರು, ಬೆಂಗಳೂರಿನ ಆರ್‌.ವಿ.ಎಂ ಫೌಂಡೇಷನ್‌ನಲ್ಲಿ ಇಂಟರ್ನಶಿಫ್‌ ಮಾಡಿದ್ದರು. ನಿರ್ಗತಿಕ ಮಹಿಳೆಯರ ರಕ್ಷಣೆ, ಪಾಲನೆ ಮಾಡುವ ಅನುಭವ ಪಡೆಯಬೇಕೆಂದೇ ಅವರು ಈ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಆಶ್ರಮವನ್ನು ಸ್ಥಾಪಿಸಿದ ಬಳಿಕವೂ ಕೆಲಸ ಮಾಡಿಕೊಂಡೇ ಮಹಿಳೆಯರ ಆರೈಕೆ ಮಾಡುತ್ತಿದ್ದರು. ಸುಷ್ಮಾ ಅವರ ಅಜ್ಜಿ ಆರ್ಥಿಕ ಸಹಾಯ ಮಾಡುವ ಜೊತೆಗೆ ಮಹಿಳೆಯರ ಆರೈಕೆಯಲ್ಲೂ ತೊಡಗುತ್ತಿದ್ದರು. ಸುಷ್ಮಾರ ಅವರ ಈ ಕಾರ್ಯಕ್ಕೆ ಗಂಡ ರವಿಕುಮಾರ್‌ ಬೆಂಬಲವಾಗಿ ನಿಂತಿದ್ದಾರೆ.

 

- ಎನ್‌.ನವೀನ್‌ಕುಮಾರ್

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು