ಸುಷ್ಮಾ ಜೆ.ಪಿ

ಮೈಸೂರು‌ | ಪರಿಸರ

200 ಗಿಡ ನೆಟ್ಟು ಪೋಷಿಸಿದ ಪ್ರವಾಸೋದ್ಯಮ ಇಲಾಖೆ ಉದ್ಯೋಗಿ

 

ಪರಿಸರದ ಬಗ್ಗೆ ಕಾಳಜಿ ಹೊಂದಿರುವ ಸುಷ್ಮಾ ಜೆ.ಪಿ ಅವರು ಮೈಸೂರು ಹಾಗೂ ಚಿತ್ರದುರ್ಗದಲ್ಲಿ 200ಕ್ಕೂ ಹೆಚ್ಚಿನ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ.

 

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಪಿಟ್ಲಳ್ಳಿ ಗ್ರಾಮದ ಸಿ.ಜಯಪ್ರಕಾಶ್‌, ಎಂ.ಪೂರ್ಣಿಮಾ ದಂಪತಿ ಪುತ್ರಿಯಾದ ಸುಷ್ಮಾ, ಸದ್ಯ ತಾಯಿಯೊಂದಿಗೆ ಮೈಸೂರಿನ ತೊಣಚಿಕೊಪ್ಪಲಿನಲ್ಲಿ ವಾಸವಾಗಿದ್ದಾರೆ. ತಂದೆ ಪ್ರವಾಸೋದ್ಯಮ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದಾರೆ.

 

ಬಿಎಸ್ಸಿ ಫಾರೆಸ್ಟರಿ ಓದಿರುವ ಜಯಪ್ರಕಾಶ್‌ ಅವರು, ಮಗಳ ಹುಟ್ಟುಹಬ್ಬದಂದು ಆಕೆ ಕೈಯಿಂದ ಒಂದೊಂದು ಗಿಡ ನೆಡಿಸುತ್ತಿದ್ದರು. ಸಾಲುಮರಗಳ ತಿಮ್ಮಕ್ಕನ ಬಗ್ಗೆ ಓದಿದ್ದ ಸುಷ್ಮಾ, ತಿಮ್ಮಕ್ಕನಂತೆ ತಾನೂ ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂಬ ನಿರ್ಧಾರಕ್ಕೆ ಬಂದರು. ಕಳೆದ ಐದು ವರ್ಷಗಳಿಂದ ಗಿಡಗಳನ್ನು ನೆಡುತ್ತಿದ್ದಾರೆ. ಚಿತ್ರದುರ್ಗದ ಜೋಗಿಮಟ್ಟಿನಲ್ಲಿ ಹೊಂಗೆ, ಬೇವು, ಸಂಪಿಗೆಯ 100ಕ್ಕೂ ಹೆಚ್ಚಿನ ಗಿಡಗಳನ್ನು ನೆಟ್ಟಿದ್ದಾರೆ.

 

ಚಾಮುಂಡಿಬೆಟ್ಟದಲ್ಲಿರುವ ಸರ್ಕಾರಿ ಶಾಲೆ ಸುತ್ತಮುತ್ತ 30ಕ್ಕೂ ಹೆಚ್ಚಿನ ಗಿಡಗಳನ್ನು ನೆಡುವುದರ ಜೊತೆಗೆ, ಬೆಟ್ಟದಲ್ಲಿ ಬೀಜದುಂಡೆಗಳನ್ನು ಹಾಕಿದ್ದಾರೆ. ಸರಸ್ವತಿಪುರಂ, ತೊಣಚಿಕೊಪ್ಪಲು ಭಾಗದ ರಸ್ತೆ ಬದಿಯ ಮನೆಗಳ ಮುಂದೆ ಸಂಪಿಗೆ ಗಿಡಗಳನ್ನು ನೆಟ್ಟಿದ್ದು, ಅವುಗಳನ್ನು ನೋಡಿಕೊಳ್ಳುವಂತೆ ಆಯಾ ಮನೆಗಳ ಮಾಲೀಕರಿಗೆ ಮನವೊಲಿಸಿದ್ದಾರೆ. ಗಿಡಗಳು ಜಾನುವಾರುಗಳಿಂದ ರಕ್ಷಣೆ ಮಾಡಲು ಬೆತ್ತದ ಬೇಲಿ ಅಳವಡಿಸಿದ್ದಾರೆ.

 

ಚಿತ್ರಕಲಾವಿದೆಯೂ ಆಗಿರುವ ಅವರು ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಚಿತ್ರಗಳನ್ನು ರಚಿಸಿದ್ದಾರೆ. ಕೆಪಿಎಸ್‌ಸಿ ಪರೀಕ್ಷೆ ಬರೆದಿದ್ದ ಸುಷ್ಮಾ, ಈ ಸಾಲಿನಲ್ಲಿ ಜಿಲ್ಲಾ ಖಜಾನಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.

 

- ಎನ್‌. ನವೀನ್‌ಕುಮಾರ್‌

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು