ಸುಪ್ರಿಯಾ ಎಸ್‌.ರಾವ್‌

ಶಿವಮೊಗ್ಗ | ಮನರಂಜನೆ

ಚಂದನವನಕ್ಕೆ ಜಿಗಿದ ರಂಗಭೂಮಿಯ 'ಸಂಜನಾ'

 

ಹವ್ಯಾಸಿ ರಂಗಭೂಮಿಯ ಪ್ರತಿಭಾವಂತ ನಟಿ ಸುಪ್ರಿಯಾ ಎಸ್‌. ರಾವ್ ಈಗ ಕಿರುತೆರೆ, ಬೆಳ್ಳಿತೆರೆಯಲ್ಲೂ ಸದ್ದು ಮಾಡುತ್ತಿದ್ದಾರೆ. ರಕ್ತಗತವಾಗಿ ಬಂದ ರಂಗಭೂಮಿ, ಸಂಗೀತದ ನಂಟನ್ನೇ ಸಾಧನೆಯ ಮೆಟ್ಟಿಲಾಗಿಸಿಕೊಂಡ ಅವರು ಮೂರು ಕ್ಷೇತ್ರಗಳಲ್ಲೂ ಛಾಪು ಮೂಡಿಸಿದ್ದಾರೆ.

 

ತಂದೆ ಎಸ್‌.ಎನ್‌. ಸುರೇಶ್ ಭದ್ರಾವತಿಯ ಎಂಪಿಎಂ ನೌಕರರಾಗಿದ್ದರು. ರಂಗಭೂಮಿ ಕಲಾವಿದರಾಗಿದ್ದ ಅವರು ಸಾಕಷ್ಟು ನಾಟಕ ಬರೆದು, ನಿರ್ದೇಶಿಸಿದ್ದಾರೆ. ತಾಯಿ ಸೀತಾಲಕ್ಷ್ಮಿ ಸಂಗೀತ ಸರಸ್ವತಿ. ಮನೆಯಲ್ಲೇ ಇಂತಹ ವಾತಾವರಣ ಸಿಕ್ಕ ಪರಿಣಾಮ ಸುಪ್ರಿಯಾ ಹಾಡು ಹೇಳುವುದು, ಅಭಿನಯಿಸುವುದನ್ನು ಬಾಲ್ಯದಲ್ಲೇ ಕರಗತ ಮಾಡಿಕೊಂಡಿದ್ದರು.

 

ರಂಗಭೂಮಿಯ ಮೊದಲ ಗುರು ರೇಣುಕಪ್ಪ. ಮಕ್ಕಳ ನಾಟಕ ‘ಪಿನೋಕಿಯೋ’ ಮೊದಲು ಬಣ್ಣಹಚ್ಚಿದ್ದು. ನಂತರ ರೇಣುಕಪ್ಪ ನಿರ್ದೇಶನದ ಗಿರಿಜಾ ಕಲ್ಯಾಣದಲ್ಲಿ ಪೂರ್ಣಪ್ರಮಾಣದ ನಾಯಕಿಯಾಗಿ ಅಭಿನಯಿಸಿದ್ದರು. ಅವರಲ್ಲಿನ ಸುಪ್ತಪ್ರತಿಭೆ ಅನಾವರಣಕ್ಕೆ ಅವಕಾಶ ಮಾಡಿಕೊಟ್ಟವರು ಡಾ.ಸಾಸ್ವೆಹಳ್ಳಿ ಸತೀಶ್ ಹಾಗೂ ಅವರ ‘ಹೊಂಗಿರಣ’ ತಂಡ.

 

ಕಿತ್ತೂರ ನಿರಂಜನಿ, ಕರ್ಣಾಂತರಂಗ, ಯಹೂದಿ ಹುಡುಗಿ, ಮಂಥರೆ, ಮೈಥಿಲಿ, ದಿ ಇನ್‌ಸ್ಪೆಕ್ಟರ್ ಜನರಲ್‌, ಕರ್ಣಾಂತರಂಗ, ರಾವಣ ದರ್ಶನಂ ಅವರಿಗೆ ಹೆಸರು ತಂದುಕೊಟ್ಟಿವೆ.

 

ಕವಿ ಎಚ್‌.ಎಸ್.ವೆಂಕಟೇಶ ಮೂರ್ತಿ ಅವರ ‘ಹಸಿರು ರಿಬ್ಬನ್’, ‘ಅಮೃತ ವಾಹಿನಿ’, ‘ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ’, ‘ಮಾತೃ ಜನನ’ ಅವರ ಅಭಿನಯದ ಚಿತ್ರಗಳು. ಬೀ.ಚಿ. ಕಾದಂಬರಿ ಆಧಾರಿತ ಚಿತ್ರ ‘ಲಚ್ಚಿ’ ಬಿಡುಗಡೆಗೆ ಸಿದ್ಧವಾಗಿದೆ. ಟಿ.ಎನ್‌. ಸೀತಾರಾಮ್ ಅವರ ‘ಮಗಳು ಜಾನಕಿ’ ಧಾರಾವಾಹಿಯಲ್ಲಿ ಸಂಜನಾ ಪಾತ್ರದಲ್ಲಿ ನಟಿಸುತ್ತಿದ್ದಾರೆ.

 

- ಚಂದ್ರಹಾಸ ಹಿರೇಮಳಲಿ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು