ಸುಮಂಗಲಾ

ಕೋಲಾರ | ಸಾಹಿತ್ಯ

ಸಾಹಿತ್ಯ ಕೃಷಿಯಿಂದ ಮನೆ ಮಾತು

 

‘ಶಿಲ್ಪಿಗಳ ಊರು’ ಮಾಲೂರು ಪಟ್ಟಣದ ಕವಯಿತ್ರಿ ಸುಮಂಗಲಾ ಸಾಹಿತ್ಯ ಕೃಷಿ ಮೂಲಕ ಮನೆ ಮಾತಾಗಿದ್ದಾರೆ. ಸಾಹಿತ್ಯದ ಜತೆಗೆ ರಂಗಭೂಮಿ ಕ್ಷೇತ್ರದಲ್ಲೂ ಸಕ್ರಿಯರಾಗಿರುವ ಇವರು ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಶಿಕ್ಷಣ ಧಾರೆ ಎರೆಯುತ್ತಿದ್ದಾರೆ.

 

ತಂದೆ ನಾಗರಾಜ್‌ ರಂಗಕರ್ಮಿಯಾಗಿದ್ದು, ಅವರಿಂದ ಪ್ರೇರಣೆ ಪಡೆದ ಸುಮಂಗಲಾ ಬಾಲ್ಯದಿಂದಲೂ ಸಾಹಿತ್ಯದ ಗೀಳು ಬೆಳೆಸಿಕೊಂಡವರು. ಅಜ್ಜಿ ಹೇಳುತ್ತಿದ್ದ ಜನಪದ ಕಥೆಗಳಿಂದ ಸ್ಫೂರ್ತಿ ಪಡೆದು ಸಾಹಿತ್ಯ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿದವರು.

 

ತಾಲ್ಲೂಕಿನ ಶಾಮಶೆಟ್ಟಹಳ್ಳಿ ಗ್ರಾಮದ ನಾಗರಾಜ್ ಮತ್ತು ಅನಸೂಯ ದಂಪತಿಯ ಮಗಳಾದ ಸುಮಂಗಲಾ ಮಾಸ್ತಿ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪೂರೈಸಿದರು. ಬಳಿಕ ಮಾಲೂರು ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ಮತ್ತು ಪದವಿ ಶಿಕ್ಷಣ ಪಡೆದರು. ವಿದ್ಯಾರ್ಥಿ ದಿಸೆಯಲ್ಲಿ ಕವಿತೆ ಬರೆದು ಶಿಕ್ಷಕರ ಮೆಚ್ಚುಗೆ ಗಳಿಸಿದ ಇವರು ಉತ್ತಮ ವಾಗ್ಮಿ.

 

ಎಂ.ಎ ಪದವೀಧರೆಯಾದ ಇವರು ಬಡ ಮಕ್ಕಳಿಗೆ ಮನೆಯಲ್ಲೇ ಉಚಿತವಾಗಿ ಇಂಗ್ಲಿಷ್‌ ತರಗತಿ ನಡೆಸುತ್ತಿದ್ದಾರೆ. ಇವರ ರಚನೆಯ ಕನ್ನಡ ನಿಘಂಟು, ಗಜಲ್ ಸಂಕಲನ, ಅಜ್ಜಿ ಕಥೆಗಳು ಹಾಗೂ ಮಕ್ಕಳ ಕಥೆಗಳು ಸಾಹಿತ್ಯಾಸಕ್ತರ ಗಮನ ಸೆಳೆದಿವೆ. ಇತ್ತೀಚೆಗೆ ಬಿಡುಗಡೆಯಾದ ‘ಖಾಲಿ ಹಾಳೆ’ ಕವನ ಸಂಕಲನವು ಸಾಹಿತ್ಯಾಸಕ್ತರ ಮೆಚ್ಚುಗೆ ಗಳಿಸಿದೆ. ಹಲವು ಸಂಘ ಸಂಸ್ಥೆಗಳು ಇವರ ಸಾಹಿತ್ಯ ಸೇವೆ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿವೆ.

 

-ಜೆ.ಆರ್.ಗಿರೀಶ್‌

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು