ಸುಮನಾ ದಾಸರಾಜು

ತುಮಕೂರು | ಶಾಸ್ತ್ರೀಯ ಸಂಗೀತ

ಉಪನ್ಯಾಸಕ ವೃತ್ತಿ ಬಿಟ್ಟು ‘ಸಂಗೀತ ಸುಧೆ’ ಹರಿಸುವ ಕಾಯಕ

 

 

ಪಕ್ಕದ ಮನೆಯ ಸಂಗೀತ ಶಿಕ್ಷಕಿಯ ಪ್ರೋತ್ಸಾಹದ ಮಾತಿನಿಂದ ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡವರು ಸುಮನಾ ದಾಸರಾಜು. ತುಮಕೂರಿನ ಸಪ್ತಗಿರಿ ಬಡಾವಣೆಯ ನಿವಾಸಿಯಾದ ಇವರು ಕರ್ನಾಟಕ ಶಾಸ್ತ್ರೀಯ ಸಂಗೀತದ ಕಲಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.

 

ಜಿಲ್ಲೆಯ ಹಲವಾರು ಸಂಘ–ಸಂಸ್ಥೆಯ ವೇದಿಕೆ ಸಮಾರಂಭಗಳಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಮ್ಮ ಸಂಗೀತದ ನಾದ ಹರಿಸಿ, ಸಭಿಕರಿಗೆ ಕರ್ಣಾನಂದ ನೀಡಿದ್ದಾರೆ, ನೀಡುತ್ತಿದ್ದಾರೆ.

 

ಈಗ ವಿದ್ವತ್ ಪದವಿ ಗಳಿಸಲು ಸಂಗೀತದ ಶಿಷ್ಟ ಅಧ್ಯಯನವನ್ನು ಮಾಡುತ್ತಿದ್ದಾರೆ. ಜತೆಗೆ ವೀಣೆ ವಾದನದಲ್ಲಿ ಸಿನಿಯರ್ ಶ್ರೇಣಿ ಗಳಿಸಲು ಅಭ್ಯಾಸ ಮಾಡುತ್ತಿದ್ದಾರೆ. ಬಿಬಿಎಂ ಮತ್ತು ಎಂ.ಕಾಂ. ಪದವಿ ಮುಗಿಸಿರುವ ಇವರು, ಕೆಲ ಕಾಲ ಅರೆಕಾಲಿಕ ಉಪನ್ಯಾಸಕರಾಗಿಯೂ ದುಡಿದರು. ಸಂಗೀತ ಅಭ್ಯಾಸಕ್ಕಾಗಿ ಸಿಕ್ಕ ಕೆಲಸವನ್ನು ಬಿಟ್ಟರು.

 

ಸಪ್ತ ಸ್ವರ ಉಚ್ಛಾರಣೆಯ ಕಲೆಯನ್ನು ಕರಗತ ಮಾಡಿಕೊಂಡು, ಸಂಗೀತದ ರಂಗದಲ್ಲಿ ಬಹು ಎತ್ತರಕ್ಕೆ ಬೆಳೆಯಬೇಕು. ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಕಛೇರಿಗಳನ್ನು ನೀಡಬೇಕೆಂದು ಇವರು ಮಹದಾಸೆಗಳನ್ನು ಕಟ್ಟಿಕೊಂಡಿದ್ದಾರೆ. ಅದಕ್ಕಾಗಿ ಅವಿರತ ಶ್ರಮವನ್ನು ಹಾಕುತ್ತಿದ್ದಾರೆ.

 

ಇವರಿಗೆ ಪ್ರೋತ್ಸಾಹ ನೀಡಲು ತಂದೆಯಾದ ಬಿ.ವಿ.ದಾಸರಾಜು, ತಾಯಿ ನಾಗರತ್ನ ಹಿಂದೆ ಬಿದ್ದಿಲ್ಲ. ತುಮಕೂರಿನ ಜ್ಞಾನಬುತ್ತಿ ಸತ್ಸಂಗ ಕೇಂದ್ರದೊಂದಿಗೆ ನಿಕಟ ಬಾಂಧವ್ಯ ಹೊಂದಿರುವ ಇವರು, ಅಲ್ಲಿನ ನಡೆಯುವ ಕಾರ್ಯಕ್ರಮಗಳನ್ನು ಪ್ರಾರ್ಥನ ಗೀತೆ ಹಾಡುತ್ತ ಶುಭಾರಂಭ ಮಾಡುತ್ತಾರೆ.

 

-ಪೀರ್‌ಪಾಷಾ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು