ಬೆಂಗಳೂರು | ಸಮಾಜ ಸೇವೆ
ಇವರು ಓದಿದ್ದು ಎಂಜಿನಿಯರಿಂಗ್. ಆದರೆ, ತೊಡಗಿಸಿಕೊಂಡಿರುವುದು ಕಸ ವಿಲೇವಾರಿ ವ್ಯವಸ್ಥೆಯನ್ನು ಸರಿದಾರಿಗೆ ತರುವ ಕಾಯಕದಲ್ಲಿ.
ಆರೋಗ್ಯ, ಶಿಕ್ಷಣ ಹಾಗೂ ಪರಿಸರ ವಿಚಾರಗಳನ್ನು ಪ್ರಮುಖ ವಿಷಯವನ್ನಾಗಿಸಿಕೊಂಡು ‘ವೇದನ್’ ಎಂಬ ಸರ್ಕಾರೇತರ ಸಂಸ್ಥೆಯನ್ನು ಮೂರು ವರ್ಷಗಳ ಹಿಂದೆ ಹುಟ್ಟುಹಾಕಿದ್ದಾರೆ ಸುಹಾಸಿನಿ . ಮಾರುಕಟ್ಟೆಗಳನ್ನು ಸ್ವಚ್ಛವಾಗಿಡಲು ತಮ್ಮದೇ ಆದ ಯೋಜನೆ ರೂಪಿಸಿರುವ ಸುಹಾಸಿನಿ ಬಿಬಿಎಂಪಿ ಜೊತೆ ಸೇರಿ ಅದನ್ನು ಜಾರಿಗೊಳಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.
ಮಾರುಕಟ್ಟೆಗಳಲ್ಲಿ ಉತ್ಪಾದನೆ ಆಗುವ ಕಸವನ್ನು ಆರಂಭಿಕ ಹಂತದಲ್ಲೇ ವಿಂಗಡಣೆ ಮಾಡಿದರೆ ಅದನ್ನು ಹಂದಿಗಳಿಗೆ ಹಾಗೂ ಹಸುಗಳಿಗೆ ಆಹಾರವಾಗಿ ಬಳಸಬಹುದು. ಈ ಮೂಲಕ ಶೇ 50ರಷ್ಟು ಕಸ ಭೂಭರ್ತಿ ಕೇಂದ್ರ ಸೇರುವುದನ್ನು ತಡೆಯಬಹುದು. ಈ ಕಾರ್ಯದಲ್ಲಿ ವೇದನ್ ಸಂಸ್ಥೆ ತೊಡಗಿಸಿಕೊಂಡಿದೆ.
‘ಒಮ್ಮೆ ಶಾಲೆಯೊಂದರಲ್ಲಿ ಬೇಸಿಗೆ ಶಿಬಿರ ನಡೆಸಿದಾಗ ಜನತಾ ಕಾಲೊನಿಯವರು ಕಸವನ್ನೆಲ್ಲ ಸುಡುತ್ತಿದ್ದರು. ಕಸ ವಿಲೇವಾರಿ ಗುತ್ತಿಗೆದಾರರು ಬಾರದ ಕಾರಣ ಹೀಗೆ ಮಾಡುತ್ತಿದ್ದರು. ಆಗಿನಿಂದಲೇ ಕಸದ ವಿಚಾರ ಮನಸ್ಸು ಕಾಡುತ್ತಿತ್ತು. ಎಲ್ಲೆಂದರಲ್ಲಿ ಕಸ ಬಿಸಾಡಿ ನಗರದ ಅಂದ ಗೆಡಿಸುವ ಪ್ರವೃತ್ತಿಗೆ ಇತಿಶ್ರೀ ಹಾಡಬೇಕು. ಅವುಗಳ ವ್ಯವಸ್ಥಿತ ವಿಲೇವಾರಿಯಲ್ಲಿ ನೆರವಾಗಬೇಕು ಎಂದು ಅವತ್ತೆ ನಿರ್ಧರಿಸಿದೆ’ ಎನ್ನುತ್ತಾರೆ ಸುಹಾಸಿನಿ.
ಶಾಲಾ ಶಿಕ್ಷಣ ಗುಣಮಟ್ಟ ಸುಧಾರಣೆ, ಕಾಲೇಜು ವಿದ್ಯಾರ್ಥಿಗಳು ವ್ಯಕ್ತಿತ್ವ ರೂಪಿಸಿಕೊಳ್ಳಲು ನೆರವಾಗು ಮಂಥನ ಕಾರ್ಯಕ್ರಮದಲ್ಲೂ ಇವರ ಸಂಸ್ಥೆ ತೊಡಗಿಸಿಕೊಂಡಿದೆ.
‘ಸ್ವಚ್ಛ ನಗರವನ್ನು, ಸ್ವಚ್ಛ ಸಮಾಜವನ್ನು ರೂಪಿಸುವ ಕನಸು ಸಾಕಾರಗೊಳಿಸಲು ಭ್ರಷ್ಟ ವ್ಯವಸ್ಥೆ ಅಷ್ಟು ಸುಲಭವಾಗಿ ಅವಕಾಶ ನೀಡುವುದಿಲ್ಲ. ಆದರೆ, ನಾವು ಪಣತೊಟ್ಟು ಕೆಲಸ ಮಾಡಿದರೆ ಖಂಡಿತಾ ಯಶಸ್ಸು ಒಲಿಯುತ್ತದೆ’ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ ಸುಹಾಸಿನಿ.
- ಪ್ರವೀಣ್ ಕುಮಾರ್ ಪಿ.ವಿ.