ಇ.ಶ್ರೀನಿವಾಸ್‌

ದಾವಣಗೆರೆ | ಕುಸ್ತಿ

ಬಡತನದ ಬೆಂಕಿಯಲ್ಲಿ ಅರಳಿದ ಪೈಲ್ವಾನ್‌

 

ಮಾವ ಚಂದ್ರಪ್ಪ ಆಡುತ್ತಿದ್ದ ಕುಸ್ತಿಯನ್ನು ಬಾಲ್ಯದಲ್ಲಿ ನೋಡುತ್ತಿದ್ದ ದಾವಣಗೆರೆಯ ಇ. ಶ್ರೀನಿವಾಸ್‌ ಅವರಲ್ಲಿ ತಾನೂ ಪೈಲ್ವಾನ್ ಆಗಬೇಕು ಎಂಬ ಕನಸು ಮೊಳಕೆಯೊಡೆದಿತ್ತು. ಕೂಲಿ ಮಾಡಿ ಜೀವನ ನಡೆಸುವ ಈರಣ್ಣ ಹಾಗೂ ದುಗ್ಗಮ್ಮ ದಂಪತಿಯ ಮಗನ ಉತ್ಸಾಹ ನೋಡಿದ ಚಂದ್ರಪ್ಪ, ದಿನಾಲೂ ಗರಡಿ ಮನೆಗೆ ಕರೆದುಕೊಂಡು ಹೋಗಿ ಶ್ರೀನಿವಾಸ್‌ ಕನಸಿಗೆ ನೀರೆರೆದರು.


ನಾಲ್ಕನೇ ತರಗತಿಯಲ್ಲಿದ್ದಾಗ ಹಳಿಯಾಳದಲ್ಲಿ ನಡೆದ ಕುಸ್ತಿಯಲ್ಲಿ ಸಿಕ್ಕ ಮೊದಲ ಬೆಳ್ಳಿ ಪದಕದಿಂದ ಸ್ಫೂರ್ತಿ ಪಡೆದು ದಾವಣಗೆರೆಯ ಕ್ರೀಡಾ ವಸತಿನಿಲಯಕ್ಕೆ ಶ್ರೀನಿವಾಸ್‌ ಪ್ರವೇಶ ಪಡೆದರು.


ಅಂತರರಾಷ್ಟ್ರೀಯ ಕುಸ್ತಿ ತರಬೇತುದಾರ ಶಿವಾನಂದ್‌ ಅವರ ಗರಡಿಯಲ್ಲಿ ಪಳಗಿದ ಶ್ರೀನಿವಾಸ್‌, 6ನೇ ತರಗತಿಯಲ್ಲಿದ್ದಾಗ ಪುಣೆಯಲ್ಲಿ ನಡೆದ ಪೈಕಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದುಕೊಂಡರು. ನಂತರ ಸ್ಕೂಲ್‌ ಗೇಮ್ಸ್‌, ಪೈಕಾದಲ್ಲೂ ಪದಕಗಳಿಗೆ ಕೊರಳೊಡ್ಡಿದರು.


ಪಿಯು ಓದುವಾಗ ಬೆಂಗಳೂರಿನಲ್ಲಿ ನಡೆದ ಕುಸ್ತಿ ಪಂದ್ಯದಲ್ಲಿ ‘ಕೆಂಪೇಗೌಡ’ ಟೈಟಲ್‌ ಗೆದ್ದರು. ರಾಷ್ಟ್ರೀಯ ಕುಸ್ತಿ ಪಂದ್ಯದಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಅಂತರರಾಷ್ಟ್ರೀಯ ಕುಸ್ತಿಗೆ ಭಾರತದ ತಂಡ ಆಯ್ಕೆ ಮಾಡುವ ಟ್ರಯಲ್ಸ್‌ಗೆ ಅವಕಾಶ ಕಲ್ಪಿಸಿಕೊಂಡರು. ಆದರೆ, ಫೈನಲ್‌ ಪಂದ್ಯದಲ್ಲಿ ಸೋತಿದ್ದರಿಂದ ಅಂತರರಾಷ್ಟ್ರೀಯ ಕುಸ್ತಿಯಲ್ಲಿ ಪದಕ ಗೆಲ್ಲಬೇಕು ಎಂಬ ಅವರ ಆಸೆ ಕೈಗೂಡಲಿಲ್ಲ.


ಬಳಿಕ ಅಂತರ ವಿಶ್ವವಿದ್ಯಾಲಯದ ಕುಸ್ತಿ ಪಂದ್ಯದಲ್ಲಿ ಮೂರನೇ ಸ್ಥಾನವನ್ನು ಪಡೆದರು. ಮೈಸೂರಿನ ದಸರಾ ಕ್ರೀಡಾಕೂಟದಲ್ಲಿ ‘ಕರ್ನಾಟಕ ಕಿಶೋರ’ ಟೈಟಲ್‌ ಗೆದ್ದುಕೊಂಡರು. ಜಮಖಂಡಿ, ಹಾಸನದಲ್ಲಿ ನಡೆದ ಕುಸ್ತಿಯಲ್ಲಿ ‘ಕರ್ನಾಟಕ ಕೇಸರಿ’ ಟೈಟಲ್‌ ಗೆದ್ದುಕೊಂಡು, ‘ಪೈಲ್ವಾನ್‌ಗಿರಿ’ಯಲ್ಲಿ ಭರವಸೆಯ ಮಿಂಚು ಮೂಡಿಸಿದರು.


ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೆಗಲಿಗೆ ಬಿದ್ದಾಗ ಶ್ರೀನಿವಾಸ್‌ ಅವರಿಗೆ ಕೆಲಸಕ್ಕೆ ಸೇರಿಕೊಳ್ಳಬೇಕಾದ ಅನಿವಾರ್ಯ ಎದುರಾಯಿತು. ಕುಸ್ತಿಯಲ್ಲಿ ಮಾಡಿದ ಸಾಧನೆಯಿಂದಾಗಿ 2018ರಲ್ಲಿ ಭಾರತೀಯ ಸೇನೆಗೆ ಯೋಧರಾಗಿ ನೇಮಕಗೊಂಡರು. ಇದರ ನಡುವೆಯೇ ‘ಖೇಲೋ ಇಂಡಿಯಾ’ದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ, ಬೆಳ್ಳಿ ಪದಕವನ್ನೂ ಗೆದ್ದುಕೊಂಡರು.


ಇದೀಗ ನಾಸಿಕ್‌ನಲ್ಲಿರುವ ಸೇನೆಯ ಕ್ಯಾಂಪ್‌ನಲ್ಲಿ ಕುಸ್ತಿಯ ತಾಲೀಮು ನಡೆಸುತ್ತಿರುವ 21 ವರ್ಷದ ಶ್ರೀನಿವಾಸ್‌, ಅಂತರರಾಷ್ಟ್ರೀಯ ಸ್ಪರ್ಧೆಗೆ ತಮ್ಮನ್ನು ಸಜ್ಜುಗೊಳಿಸಿಕೊಳ್ಳುತ್ತಿದ್ದಾರೆ.


‘ಅಂತರರಾಷ್ಟ್ರೀಯ ಕುಸ್ತಿ ಪಂದ್ಯದಲ್ಲಿ ದೇಶಕ್ಕೆ ಪದಕ ತಂದುಕೊಡಬೇಕು ಎಂಬ ಗುರಿ ಹೊಂದಿದ್ದೇನೆ. ಬಡ ಕುಟುಂಬದಿಂದ ಬಂದ ನನ್ನ ಈ ಸಾಧನೆಗೆ ಹಣಕಾಸಿನ ನೆರವಿನ ಜೊತೆಗೆ ಮಾರ್ಗದರ್ಶನ ನೀಡಿದ ತರಬೇತುದಾರ ಶಿವಾನಂದ್‌ ಆರ್‌. ಅವರ ಕನಸೂ ಇದೇ ಆಗಿದೆ’ ಎಂದ ಶ್ರೀನಿವಾಸ್‌ ಅವರ ಮಾತಿನಲ್ಲಿ ಸಾಧಿಸುವ ಛಲ ಇಣುಕುತ್ತಿತ್ತು.


‘ಸುಶೀಲ್‌ ಕುಮಾರ್‌ ನನ್ನ ಮೆಚ್ಚಿನ ಕುಸ್ತಿಪಟು. ಒಲಿಂಪಿಕ್ಸ್‌ನಲ್ಲಿ ಅವರು ಪದಕ ಗೆದ್ದ ಬಳಿಕ ದೇಶದಲ್ಲಿ ಕುಸ್ತಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಅವರು ಆಡಿದ ಕುಸ್ತಿಯ ವಿಡಿಯೊಗಳನ್ನು ನೋಡಿ ಹಲವು ಟೆಕ್ನಿಕ್‌ಗಳನ್ನು ಕಲಿತುಕೊಂಡಿದ್ದೇನೆ.  ಸ್ಪರ್ಧೆಗೆ ತೆರಳಿದಾಗ ಎದುರಾಳಿಗಳ ಆಟ ನೋಡಿ, ಅವರ ಮನೋಬಲವನ್ನು ಹೇಗೆ ಕುಗ್ಗಿಸಬಹುದು ಎಂಬುದನ್ನು ಗೊತ್ತುಮಾಡಿಕೊಂಡು ಅಖಾಡಕ್ಕೆ ಇಳಿಯುತ್ತೇನೆ’ ಎನ್ನುತ್ತಾರೆ ಶ್ರೀನಿವಾಸ್‌.


ಪೈಲ್ವಾನರಿಗೆ ನೌಕರಿ ಕೊಡಲಿ: ‘ಕುಸ್ತಿ ಆಡುವ ಪೈಲ್ವಾನರಿಗೆ ಕಡಿಮೆ ಎಂದರೂ ತಿಂಗಳಿಗೆ ₹ 10 ಸಾವಿರ ಆಹಾರಕ್ಕೇ ಖರ್ಚಾಗುತ್ತದೆ. ಬಡ ಕುಟುಂಬದಿಂದ ಬಂದ ಎಷ್ಟೋ ಪೈಲ್ವಾನರಿಗೆ ಹಣ ಹೊಂದಿಸಲೂ ಸಾಧ್ಯವಾಗದೇ ಕುಸ್ತಿ ಆಡುವುದನ್ನು ಬಿಟ್ಟು ಸಣ್ಣ ಪುಟ್ಟ ಕೆಲಸ ಹುಡುಕಿಕೊಂಡು ಹೋಗುತ್ತಿದ್ದಾರೆ. ನೌಕರಿ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಪೋಷಕರೂ ಮಕ್ಕಳನ್ನು ಗರಡಿಮನೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಕುಸ್ತಿಯನ್ನು ಉಳಿಸಿ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಪದಕಗಳು ಬರುವಂತಾಗಲು ಕುಸ್ತಿಪಟುಗಳಿಗೆ ಸರ್ಕಾರ ನೌಕರಿ ಕೊಡಬೇಕು’ ಎನ್ನುವುದು ಅವರ ಆಗ್ರಹ.

 

–ವಿನಾಯಕ ಭಟ್‌

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು