ಶ್ರೀಧರ್‌ ನಾಗರಾಜ್‌

ಬೆಂಗಳೂರು | ತಂತ್ರಜ್ಞಾನ

ಮೊಬೈಲ್‌ಗೆ ಒಲಿದ ‘ಜಸ್ಟ್‌ ಕನ್ನಡ’

 

 

ಅದು 2012ರ ಸಮಯ. ಜನರ ಕೈಯಲ್ಲಿ ಸ್ಮಾರ್ಟ್‌ಫೋನ್‌ಗಳು ಆಗತಾನೆ ಕಾಣಿಸಿಕೊಳ್ಳಲಾರಂಭಿಸಿದ್ದವು.  ಆದರೆ, ಅವುಗಳಲ್ಲೊಂದು ಕೊರತೆ ಇತ್ತು; ಕಂಪ್ಯೂಟರ್‌ಗಳ ಕೀಲಿಮಣೆಯಲ್ಲಿ ಕನ್ನಡದ ವರ್ಣಮಾಲೆಯನ್ನು ಟೈಪಿಸುವಂತಹ ವ್ಯವಸ್ಥೆ ಮೊಬೈಲ್‌ಗಳಲ್ಲಿರಲಿಲ್ಲ. ಮೊಬೈಲ್‌ನಲ್ಲೂ ಕನ್ನಡವನ್ನು ಸುಲಭವಾಗಿ ಟೈಪಿಸುವುದನ್ನು ಮೊದಲ ಬಾರಿಗೆ ಸಾಧ್ಯವಾಗಿಸಿದ್ದು ಬೆಂಗಳೂರಿನ ಶ್ರೀಧರ್‌ ನಾಗರಾಜ್‌.

 

ಅವರು ರೂಪಿಸಿದ ‘ಜಸ್ಟ್‌ ಕನ್ನಡ’ ಆ್ಯಪ್‌ ಸ್ಮಾರ್ಟ್‌ಪೋನ್‌ಗಳಲ್ಲಿ ಕನ್ನಡ ಬಳಸುವವರ ನೆಚ್ಚಿನ ಕೀಲಿಮಣಿ. ಆ್ಯಂಡ್ರಾಯ್ಡ್‌ ಪೋನ್‌ಗಳಲ್ಲಿ ಭಾರತದ ಭಾಷೆಗಳಲ್ಲಿ ಮೊದಲು ಕೀಲಿಮಣೆ ಅಳವಡಿಕೆಯಾಗಿದ್ದು ಕನ್ನಡದ ವರ್ಣಮಾಲೆಗೆ. 20 ಲಕ್ಷಕ್ಕೂ ಹೆಚ್ಚು ಮಂದಿ ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ.  ಹಿಂದಿ, ತೆಲುಗು, ಬಂಗಾಳಿ, ಮರಾಠಿ ಹಾಗೂ ಮಲಯಾಳ ಕೀಲಿಮಣೆಗಳನ್ನೂ ಅವರು ಅಭಿವೃದ್ಧಿಪಡಿಸಿದ್ದಾರೆ.

 

‘ಕನ್ನಡದ ಕೀಲಿಮಣೆಗಳ ಜನಕ ಕೆ.ಪಿ.ರಾವ್‌ ನನ್ನ ಗುರುಗಳು. ಅವರು ಕಂಪ್ಯೂಟರ್‌ಗೆ ಕನ್ನಡ ಒಲಿಯುವಂತೆ ಮಾಡಿದ್ದರೆ, ನಾನು ಸ್ಮಾರ್ಟ್‌ಫೋನ್‌ಗಳಿಗೆ ಕನ್ನಡ ಒಲಿಯುವಂತೆ ಮಾಡಿದೆ. ನನಗಿದರಿಂದ ಆರ್ಥಿಕ ಲಾಭವಿಲ್ಲ. ಕನ್ನಡಕ್ಕಾಗಿ ಕಿಂಚಿತ್‌ ಕಾಣಿಕೆ ಅಷ್ಟೇ’ ಎಂದು ವಿನಮ್ರವಾಗಿ ಹೇಳುತ್ತಾರೆ ಶ್ರೀಧರ್‌ ನಾಗರಾಜ್‌.

 

‘ನುಡಿ ತಂತ್ರಾಂಶ ಬಳಸುತ್ತಿದ್ದ ನನ್ನ ತಂದೆ ಮೊಬೈಲ್‌ನಲ್ಲಿ ಕನ್ನಡ ಟೈಪಿಸಲು ಆಗುವುದಿಲ್ಲವೇಕೆ ಎಂದೊಮ್ಮೆ ಕೇಳಿದ್ದರು. ಲೈನೆಕ್ಸ್‌ ಬಗ್ಗೆ ತಿಳಿದಿದ್ದ ನನಗೆ ಇದು ಕಷ್ಟವಲ್ಲ ಎಂದೆನಿಸಿತು. ಅದೇ ವೇಳೆ ಗೂಗಲ್‌ ಓಪನ್‌ ಸೋರ್ಸ್‌ ಆ್ಯಂಡ್ರಾಯ್ಡ್‌ ಬಿಡುಗಡೆ ಮಾಡಿತು. ಇದರಿಂದಾಗಿ ಕನ್ನಡದ ಕೀಲಿಮಣೆ ರೂಪಿಸುವುದು ಮತ್ತಷ್ಟು ಸುಲಭವಾಯಿತು’ ಎಂದು ಅವರು ತಿಳಿಸಿದರು.

 

‘ಜಸ್ಟ್‌ ಕನ್ನಡ’ ಆ್ಯಪ್‌ಗೆ ಈಗ ಶಬ್ದಕೋಶವನ್ನು ಜೋಡಿಸಲಾಗಿದೆ. ಗೂಗಲ್‌ ವಾಯ್ಸ್‌ ಜೋಡಿಸುವ ಮೂಲಕ ಧ್ವನಿ ಬಳಸಿ ಟೈಪಿಸುವುದೂ ಇದರಲ್ಲೀಗ ಸಾಧ್ಯ. ಕನ್ನಡದ ಸ್ಟಿಕ್ಕರ್‌ಗಳನ್ನೂ ಪಡೆಯಬಹುದು.

 

- ಪ್ರವೀಣ್ ಕುಮಾರ್ ಪಿ.ವಿ.

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು