ಶಿವಕುಮಾರ್

ಮಂಗಳೂರು | ಯಕ್ಷಗಾನ

‘ಶ್ರೀಯಕ್ಷನಿಧಿ’ ಮೂಲಕ ಮಕ್ಕಳಿಗೆ ಯಕ್ಷಗಾನ ತರಬೇತಿ

 

ದಶಕಗಳಿಂದ ಯಕ್ಷಗಾನ ರಂಗದಲ್ಲಿ ಕೃಷಿ ಮಾಡುತ್ತಿರುವ ಶಿವಕುಮಾರ್ ಅವರು ಮೂಡುಬಿದಿರೆಯಲ್ಲಿ ‘ಶ್ರೀಯಕ್ಷನಿಧಿ’ ಸಂಸ್ಥೆಯ ಮೂಲಕ 400ಕ್ಕೂ ಅಧಿಕ ಮಕ್ಕಳಿಗೆ ಕರಾವಳಿಯ ಗಂಡುಕಲೆಯ ತರಬೇತಿ ನೀಡುತ್ತಿದ್ದಾರೆ. ಹಲವು ಮೇಳಗಳಲ್ಲಿ ಪುಂಡುವೇಷ, ಸ್ತ್ರೀ ವೇಷ, ಕಿರೀಟ ವೇಷ, ಬಣ್ಣದ ವೇಷಗಳಿಗೆ ಜೀವತುಂಬಿದ್ದ ಅವರು, ಪ್ರಸ್ತುತ ಸಸಿಹಿತ್ಲು ಮೇಳದ ಕಲಾವಿದರಾಗಿ ಮತ್ತು ಯಕ್ಷಗುರುವಾಗಿ ಸೇವೆ ಸಲ್ಲಿಸುತ್ತಿದ್ದಾರೆ.

 

ಮೂಡುಬಿದಿರೆಯ ಆನಂದ ಸಪಲಿಗ ಮತ್ತು ಗಿರಿಜಾ ದಂಪತಿಯ ಪುತ್ರ ಇವರು. ಅಜ್ಜ ತುಕ್ರ ಮೇಸ್ತ್ರಿ ಅವರಿಂದಲೇ ಯಕ್ಷಗಾನದ ಒಲವು ಹುಟ್ಟಿಕೊಂಡಿತು. ಬಳಿಕ ಪುಷ್ಪರಾಜ್, ಅಶೋಕ ಆಚಾರ್ಯ, ಕರ್ಗಲ್ಲು ವಿಘ್ನೇಶ್ವರ ಭಟ್ ಇವರಿಂದ ಯಕ್ಷ ಶಿಕ್ಷಣವನ್ನು ಪಡೆದು, ಇರುವೈಲು, ಮುಂಡ್ಕೂರು, ಬಾಚಕೆರೆ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಕಟೀಲು, ಸುಂಕದಕಟ್ಟೆ ಇನ್ನಿತರ ಮೇಳಗಳಲ್ಲಿ ಹವ್ಯಾಸಿ ಕಲಾವಿದರಾಗಿ ಬಣ್ಣಹಚ್ಚಿದ ಹಿರಿಮೆ ಅವರದು.

 

ತಾನು ಕಲಿತ ಯಕ್ಷ ವಿದ್ಯೆಯನ್ನು ಮುಂದಿನ ಪೀಳಿಗೆಗೂ ಧಾರೆಯೆರೆಯಬೇಕು ಎಂಬ ದೂರದೃಷ್ಟಿಯಿಂದ ಐದು ವರ್ಷದ ಹಿಂದೆ ‘ಶ್ರೀ ಯಕ್ಷನಿಧಿ’ ಸಂಸ್ಥೆಯನ್ನು ಸ್ಥಾಪಿಸಿ, ಅದರ ಮೂಲಕ ಆಸಕ್ತ ಮಕ್ಕಳಿಗೆ ಯಕ್ಷಗಾನದ ತರಬೇತಿಯನ್ನು ನೀಡುತ್ತಿದ್ದಾರೆ. ಮುಮ್ಮೇಳದ ನಾಟ್ಯ, ಸಂಭಾಷಣೆ, ಮುಖವರ್ಣಿಕೆ ತರಬೇತಿಯನ್ನು ಅವರೇ ಕಲಿಸುತ್ತಾರೆ. ಹಿಮ್ಮೇಳದ ಭಾಗವತಿಗೆ, ಚಂಡೆ, ಮದ್ದಲೆ ತರಬೇತಿಯನ್ನು ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ನೀಡುತ್ತಾರೆ. ಮಕ್ಕಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಎರಡು ವರ್ಷದ ಹಿಂದೆ ಶ್ರೀಯಕ್ಷನಿಧಿ ಮಕ್ಕಳ ಮೇಳವನ್ನು ಆರಂಭಿಸಿದ್ದು, ಈಗಾಗಲೇ ನೂರಕ್ಕೂ ಅಧಿಕ ಪ್ರದರ್ಶನ ನೀಡಲಾಗಿದೆ.

 

-ಪ್ರದೀಶ್ ಎಚ್.

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು