ಬಳ್ಳಾರಿ
ಲಲಿತ ಕಲೆಯಲ್ಲಿ ಬಾಲ್ಯದಿಂದಲೂ ಆಸಕ್ತಿ ಹೊಂದಿದ್ದ ಸೌಮ್ಯಶ್ರೀ ಹಿರೇಮಠ ಅವರು ಈಗ ಪ‍್ರಬುದ್ಧ ಕಲಾವಿದೆಯಾಗಿ ಹೊರ ಹೊಮ್ಮಿದ್ದಾರೆ. ಹಿಂದುಳಿದ ಪ್ರದೇಶದಲ್ಲಿ ಲಲಿತಕಲೆಗಳ ಈತ ತಾನೆ ಮೊಳಕೆ ಒಡೆಯುತ್ತಿದ್ದ ಸಂದರ್ಭದಲ್ಲಿ ಅವರು ಭರತನಾಟ್ಯ ಹಾಗೂ ಕೂಚುಪುಡಿ ಪ್ರಕಾರಗಳಲ್ಲಿ ಜ್ಯೂನಿಯರ್ ಹಾಗೂ ಸೀನಿಯರ್ ಪಾಸಾಗಿದ್ದಾರೆ. ಬಾಲ್ಯದಿಂದಲೂ ವಿದ್ವಾನ್ ಎಸ್.ಕೆ.ಆರ್. ಜಿಲಾನಿ ಪಾಷಾ ಅವರ ಬಳಿ ನಾಟ್ಯ ಕಲಿಯುತ್ತಿದ್ದಾರೆ. 12 ವರ್ಷಗಳ ಹಿಂದೆಯೇ ಅವರು ರಂಗಕ್ಕೆ ಪ್ರವೇಶ ಮಾಡಿದ್ದಾರೆ. ಕರ್ನಾಟಕವೂ ಸೇರಿದಂತೆ ಆಂಧ್ರ, ತಮಿಳುನಾಡು, ತೆಲಂಗಾಣ, ದೆಹಲಿ, ಕೋಲ್ಕತ್ತಾ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಪ್ರತಿಷ್ಠಿತ ಉತ್ಸವಗಳಲ್ಲೂ ಪ್ರದರ್ಶನ ನೀಡಿದ್ದಾರೆ.
ಕರ್ನಾಟಕದಾದ್ಯಂತ 28 ಜಿಲ್ಲೆಗಳಲ್ಲಿ ಹಾಗೂ ಬಹುಪಾಲಿ ತಾಲ್ಲೂಕು ಕೇಂದ್ರಗಳಲ್ಲಿ ಪ್ರದರ್ಶನ ನೀಡಿದ್ದು ಅವರ ಹಿರಿಮೆ. ಹೈದರಾಬಾದ್‌ನಲ್ಲಿ ನಡೆದ ಗಿನ್ನಿಸ್ ದಾಖಲೆಯ ನೃತ್ಯ ಕಾರ್ಯಕ್ರಮದಲ್ಲೂ ಅವರು ಪಾಲ್ಗೊಂಡಿದ್ದು ವಿಶೇಷ. ಪಂಜಾಬ್ ದೇವಸ್ಥಾನ, ಆಗ್ರಾದ ತಾಜ್‌ಮಹಲ್, ಹಂಪಿ ಉತ್ಸವ, ಆನೆಗೊಂದಿ ಉತ್ಸವ, ಶ್ರೀಶೈಲಂನ ಮಲ್ಲಿಕಾರ್ಜುನ ದೇವಸ್ಥಾನ, ತಿರುಪತಿಯ ಬ್ರಹ್ಮೋತ್ಸವ, ಮೈಸೂರು ದಸರಾ ಇಂಥ ವಿಶ್ವಮಟ್ಟದ ವೇದಿಕೆಗಳಲ್ಲೂ ಅವರ ಪ್ರತಿಭೆ ಅನಾವರಣಗೊಂಡಿದೆ.
ಶಾಸ್ತ್ರಿಯ ನೃತ್ಯದಲ್ಲಿ ಚಿಕ್ಕಂದಿನಲ್ಲೇ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಅವರು ಹಲವು ಪ್ರಶಸ್ತಿಗಳನ್ನು ಗಳಿಸಿದ್ದಾರೆ.
-ಸಂತೋಷ ಈ. ಚಿನಗುಡಿ