ಸೋಮು ರೆಡ್ಡಿ

ಹುಬ್ಬಳ್ಳಿ | ಹೆಡ್ ಕಾನ್‌ಸ್ಟೆಬಲ್

ಪೊಲೀಸಪ್ಪನ ಸಾಹಿತ್ಯ ಪ್ರೀತಿ

 

ಪೊಲೀಸ್ ಇಲಾಖೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿರುವ ಸೋಮು ರೆಡ್ಡಿ ಸಾಹಿತ್ಯ ಪ್ರೇಮಿ. ಶಾಲಾ ದಿನಗಳಿಂದಲೇ ಹತ್ತಿಕೊಂಡ ಓದಿನ ಗೀಳು, ವೃತ್ತಿ ಜೀವನ ಆರಂಭದ ನಂತರ ಮತ್ತೊಂದು ದಿಕ್ಕಿಗೆ ಅವರನ್ನು ಸೆಳೆಯಿತು. ಬಾಲ್ಯದ ನೆನಪು ಹಾಗೂ ವೃತ್ತಿಯ ಅನುಭವಗಳೊಂದಿಗೆ ಬರಹದ ಕೃಷಿ ಆರಂಭಿಸಿದ ಅವರೀಗ, ಐದು ಕೃತಿಗಳ ಲೇಖಕ.

 

‘ಅಭಿನೇತ್ರಿ’, ‘ಕಂದೀಲು’, ‘ದೇವರ ನಾಯಿ’ (ಮುದ್ರಣ ಹಂತದಲ್ಲಿ) ಕಾದಂಬರಿ, ‘ನೋಟದಾಗ ನಗೆಯಾ ಮೀಟಿ’ ಕಥಾ ಸಂಕಲನ, ‘ತಲಾಷ್’ ನಾಟಕ ಅವರ ಪ್ರಕಟಿತ ಕೃತಿಗಳು. ಈ ಪೈಕಿ, ರಾಜ್ಯದಾದ್ಯಂತ ಪ್ರದರ್ಶನಗೊಂಡಿರುವ ‘ತಲಾಷ್‌’ ನಾಟಕ, ಇದೀಗ ಸಿನಿಮಾ ರೂಪ ತಳೆಯುತ್ತಿದೆ.

 

‘ವೈಯಕ್ತಿಕ ಬದುಕಿನ ಅನುಭವಗಳನ್ನು ಸಮಾಜದ ತರತಮಗಳಿಗೆ ಮುಖಾಮುಖಿಯಾಗಿಸಿಕೊಂಡಾಗ ಬರೆಯುವ ತುಡಿತ ಹೆಚ್ಚಿತು’ ಎನ್ನುವ ಸೋಮು ರೆಡ್ಡಿ, ಉತ್ತರ ಕರ್ನಾಟಕದ ಭಾಷಾ ಸೊಗಡನ್ನು ತಮ್ಮ ಕೃತಿಗಳಲ್ಲಿ  ಬಳಸಿಕೊಂಡಿದ್ದಾರೆ.

 

ಬರವಣಿಗೆಯ ಜತೆಗೆ, ವಿವಿಧ ವೇದಿಕೆಗಳ ಮೂಲಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಸಾಹಿತ್ಯ ಪರಿಚಾರಿಕೆ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ರಕ್ತದಾನಿಗಳ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿ, ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ರಕ್ತದಾನ ಮಾಡಿ, ಪೊಲೀಸರನ್ನು ಜನಸ್ನೇಹಿಯಾಗಿಸುತ್ತಿದ್ದಾರೆ. 

 

- ಓದೇಶ ಸಕಲೇಶಪುರ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು