ಸಿದ್ಧಾರ್ಥ ಚಿಮ್ಮಯಿದಲಾಯಿ

ಕಲಬುರ್ಗಿ | ಗಾಯನ 

ಕ್ರಾಂತಿ ಗೀತೆಗಳ ಹರಿಕಾರ ಕಲಬುರ್ಗಿಯ ‘ಗದ್ದರ್‌’ 

 

 

ಚಿಂಚೋಳಿ ತಾಲ್ಲೂಕು ಚಿಮ್ಮಾಈದಲಾಯಿ ಗ್ರಾಮದಲ್ಲಿ ಹುಟ್ಟಿ ಬೆಳೆದ ಸಿದ್ಧಾರ್ಥ ಡಿ., ಬಾಲ್ಯದಿಂದಲೂ ದಲಿತ–ಕೆಳವರ್ಗದವರ ಶೋಷಣೆ ನೋಡಿಕೊಂಡೇ ಬೆಳೆದವರು.

 

15 ವರ್ಷಗಳಿಂದ ಕಲ್ಯಾಣ ಕರ್ನಾಟಕದಲ್ಲಿ ಕ್ರಾಂತಿಗೀತೆಗಳನ್ನು ಹಾಡುತ್ತ ಜಾಗೃತಿ ಮೂಡಿಸುತ್ತಿದ್ದಾರೆ. ಬುದ್ಧ, ಅಂಬೇಡ್ಕರ್‌ ಅವರ ಜೀವನಗಾಥೆ, ಬಸವಾದಿ ಶರಣರ ವಚನಗಳು, ಸಂತ ಶಿಶುನಾಳ ಷರೀಫರ ಪದಗಳನ್ನು ಹಾಡುತ್ತ ಸಮಾಜದಲ್ಲಿ ಸಮಾನತೆ, ಶಾಂತಿ, ಸಹೋದರತ್ವ ಬೆಳೆಸುವಲ್ಲಿ ತೊಡಗಿದ್ದಾರೆ. ರಾಜ್ಯದ ಬೇರೆಬೇರೆ ಜಿಲ್ಲೆಗಳಲ್ಲೂ ಹಲವು ವೇದಿಕೆಗಳಲ್ಲಿ ಗಾಯನ ಕಾರ್ಯಕ್ರಮ ನೀಡಿದ್ದಾರೆ. 

 

ಪಿಯುಸಿ ನಂತರ ಹಿಂದೂಸ್ತಾನಿ ಶಾಸ್ತ್ರೀಯ ಗಾಯನದಲ್ಲಿಯೇ ವಿದ್ವತ್‌ ಪಡೆದಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಗಳಲ್ಲಿ ಮತ್ತು ವಿವಿಧ ಸಾಹಿತ್ಯ, ಸಾಂಸ್ಕೃತಿಕ ಸಮ್ಮೇಳನಗಳಲ್ಲಿ ಅವರು ಕಾರ್ಯಕ್ರಮ ನೀಡಿದ್ದಾರೆ. ‘ಮನುಜ ತಾನೊಂದೇ ಕುಲಂ’ ಎಂಬ ನಾಟಕಕ್ಕೂ ಸಂಗೀತ ಸಂಯೋಜನೆ ಮಾಡಿದ್ದಾರೆ.

 

ಸಿದ್ಧಾರ್ಥ ಅವರ ಕಂಚಿನ ಕಂಠ ಶಾಸ್ತ್ರೀಯ ಸಂಗೀತಕ್ಕೆ ಹೇಳಿಮಾಡಿಸಿದಂತಿದೆ. ಆದರೂ ಇವರು ಹೆಚ್ಚು ಪಳಗಿದ್ದು ಕ್ರಾಂತಿಗೀತೆ ಗಾಯನದಲ್ಲಿ. ಶುದ್ಧ ದೇಸಿ ಶೈಲಿಯನ್ನೇ ಅನುಸರಿಸುವ ಇವರ ಧ್ವನಿ ಈಗ ಜನಜನಿತ. 

 

‘ಈಗ ಭಾಷಣ ಕೇಳುವವರು ಇಲ್ಲ, ಓದುವವರು ಇನ್ನೂ ಕಡಿಮೆ. ಆದರೆ, ಹಾಡು ಕೇಳಲು ಎಲ್ಲರೂ ಇಷ್ಟಪಡುತ್ತಾರೆ. ಕ್ರಾಂತಿ ಕವಿ ಗದ್ದರ್‌ ಅವರು ಕೂಡ ಬಂಡವಾಳಶಾಹಿ ಧೋರಣೆಯನ್ನು ಇಂಥದ್ದೇ ಹಾಡಿನ ಮೂಲಕ ಖಂಡಿಸುತ್ತ ಬಂದಿದ್ದರು. ಅವರ ಶೈಲಿಯೇ ನನಗೆ ಪ್ರೇರಣೆ. ಹಾಗಾಗಿ, ಅದೇ ಮಾದರಿ ಅನುಸರಿಸುತ್ತಿದ್ದೇನೆ. ದುಡಿಯುವವರು ದುಡಿಯುತ್ತಲೇ ಇದ್ದಾರೆ. ಜಗದ ಹೊಟ್ಟೆ ತುಂಬಿಸುತ್ತಲೇ ಇದ್ದಾರೆ. ಆದರೆ, ಅವರ ಹೊಟ್ಟೆಗಳು ಇನ್ನೂ ಖಾಲಿ ಇವೆ. ಅಂಥವರಲ್ಲಿ ಅರಿವು ಮೂಡಿಸುವುದೇ ಬದುಕಿನ ಗುರಿ’ ಎನ್ನುತ್ತಾರೆ ಸಿದ್ಧಾರ್ಥ ಡಿ. ಚಿಮ್ಮಾಈದಲಾಯಿ.

 

-ಸಂತೋಷ ಈ. ಚಿನಗುಡಿ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು