ಮಂಗಳೂರು | ಭರತನಾಟ್ಯ ಕಲಾವಿದೆ
ಕೋಲ್ಮಿಂಚಿಗೆ ಸೀರೆ ಉಡುಸಿ, ಚಿನ್ನಾಭರಣ ತೊಡಿಸಿದಂತೆ ಕಂಗೊಳಿಸುವ ಯುವ ಕಲಾವಿದೆ ಶ್ವೇತಾ ಅರೆಹೊಳೆ ಕರಾವಳಿ ಭಾಗದ ಭರತನಾಟ್ಯ ಕ್ಷೇತ್ರದಲ್ಲಿ ಭರವಸೆ ಮೂಡಿಸಿರುವ ಪ್ರತಿಭೆ.
ಲಾಲಿಪಾಪ್ ಚೀಪುವ ವಯಸ್ಸಿನಲ್ಲೇ ತಾನು ಕಲಾಕ್ಷೇತ್ರದಲ್ಲೇ ಬೆಳೆಯಬೇಕು ಎಂಬ ನಿರ್ದಿಷ್ಟ ಗುರಿ ಇಟ್ಟುಕೊಂಡಿದ್ದ ಹುಡುಗಿ ಇಂದು ನೃತ್ಯ ಕ್ಷೇತ್ರದಲ್ಲಿ ತನ್ನದೇ ಹೆಜ್ಜೆ ಗುರುತುಗಳನ್ನು ಪಡಿಮೂಡಿಸಿದ್ದಾರೆ. ಈಕೆಯ ಸಾಧನೆಗೆ ಅಪ್ಪ ಅರೆಹೊಳೆ ಸದಾಶಿವರಾವ್, ಅಮ್ಮ ಗೀತಾ ಹಾಗೂ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ತಮ್ಮೆಲ್ಲಾ ಶ್ರಮವನ್ನು ಧಾರೆ ಎರೆದಿದ್ದಾರೆ.
2016ರ ಡಿ.16ರಂದು ಭರತನಾಟ್ಯ ರಂಗಪ್ರವೇಶ ಮಾಡಿದ ಶ್ವೇತಾ, ಈವರೆಗೆ ಏಕವ್ಯಕ್ತಿ ಮತ್ತು ತಂಡದಲ್ಲಿ 200ಕ್ಕೂ ಅಧಿಕ ನೃತ್ಯಪ್ರದರ್ಶನಗಳನ್ನು ನೀಡಿದ್ದಾರೆ. ರಂಗಪ್ರವೇಶ ಮಾಡುವುದಕ್ಕೂ ಮುನ್ನ ಒಂದು ಇಡೀ ವರ್ಷ ಶ್ರಮವಹಿಸಿದ್ದು, ಅವರಿಗೆ ನೃತ್ಯ ಕ್ಷೇತ್ರದಲ್ಲಿ ಇರುವ ಬದ್ಧತೆಗೆ ಸಾಕ್ಷಿಯಾಗಿದೆ. ಪತ್ರಿಕೋದ್ಯಮ ವಿಷಯದಲ್ಲಿ ಪದವಿ ಓದುತ್ತಿರುವ ಶ್ವೇತಾ, ಪದವಿ ಮುಗಿಸಿದ ನಂತರ ನೃತ್ಯ ಮತ್ತು ನಾಟಕ ಕ್ಷೇತ್ರದಲ್ಲೇ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಕನಸು ಹೊಸೆಯುತ್ತಿದ್ದಾರೆ.
‘ಚಿಕ್ಕನಿಂದಲೂ ನೃತ್ಯ, ನಾಟಕಗಳ ಬಗ್ಗೆ ಅಪಾರ ಒಲವು ಇತ್ತು. ನನ್ನ ಕನಸುಗಳಿಗೆ ರೆಕ್ಕೆ ಕಟ್ಟುವ ಸಲುವಾಗಿಯೇ ಕಲಾ ವಿಷಯವನ್ನು ಆಯ್ಕೆ ಮಾಡಿಕೊಂಡೆ. ನನ್ನ ಆಸಕ್ತಿಗೆ ಬೆನ್ನೆಲುಬಾಗಿ ನಿಂತವರು ಅಪ್ಪ, ಅಮ್ಮ ಮತ್ತು ಗುರುಗಳು. ನನ್ನ ಸಾಧನೆಗೆ ಶಕ್ತಿಯಾಗಿ ನಿಂತವರು ವಿದುಷಿ ವಿದ್ಯಾಶ್ರೀ ರಾಧಾಕೃಷ್ಣನ್. ಭರತನಾಟ್ಯದಲ್ಲಿ ಸೀನಿಯರ್ ಮುಗಿಸಿದ ನಂತರ ನಾನು ವಿದ್ಯಾಶ್ರೀ ಅವರ ಬಳಿಗೆ ನೃತ್ಯಾಭ್ಯಾಸಕ್ಕೆ ಸೇರಿದೆ. ರಂಗಪ್ರವೇಶಕ್ಕೂ ಮುನ್ನ ಒಂದಿಡೀ ವರ್ಷ ನನ್ನನ್ನು ತಿದ್ದಿ ತೀಡಿ, ಉತ್ತಮ ನೃತ್ಯಪಟುವಾಗಿ ಕಟೆದರು. ನೃತ್ಯಕ್ಷೇತ್ರದಲ್ಲಿ ಇಂದು ನಾನು ಏನಾದರೂ ಸಾಧನೆ ಮಾಡಿದ್ದೇನೆ ಎಂದಾದರೆ ಅದಕ್ಕೆ ಗುರುಗಳೇ ಪ್ರೇರಣೆ’ ಎನ್ನುತ್ತಾರೆ ಶ್ವೇತಾ.
- ಸತೀಶ್ ಬೆಳ್ಳಕ್ಕಿ