ಹುಬ್ಬಳ್ಳಿ | ಉದ್ಯಮಿ
ದಶಕದ ಹಿಂದೆ ಹುಬ್ಬಳ್ಳಿಯಲ್ಲಿ ಆರಂಭವಾಗಿದ್ದ ‘ಸೇಫ್ ಹ್ಯಾಂಡ್ಸ್ 24x7 ಸರ್ಮಿಸಸ್ ಪ್ರೈವೇಟ್ ಲಿಮಿಟೆಡ್’ ಇಂದು ರಾಜ್ಯವ್ಯಾಪಿ. ಈ ಉದ್ಯಮದ ರೂವಾರಿ ಹುಬ್ಬಳ್ಳಿಯ ಶ್ರಾವಣಿ ಪವಾರ, ಸರ್ಕಾರದಿಂದ ಪರವಾನಗಿ ಪಡೆದ ಮಹಿಳಾ ಮತ್ತು ಪುರುಷ ಭದ್ರತಾ ಸಿಬ್ಬಂದಿ ತರಬೇತುದಾರರೆನಿಸಿದ್ದಾರೆ. ಇವರು ಕಟ್ಟಿದ ಉದ್ಯಮದಲ್ಲಿ 700 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಿಎಸ್‌ಡಬ್ಲ್ಯೂ ಪದವೀಧರೆ ಶ್ರಾವಣಿ, ಮಹಿಳಾ ಸಬಲೀಕರಣದ ಗುರಿಯೊಂದಿಗೆ 2009ರಲ್ಲಿ ಈ ಉದ್ಯಮ ಪ್ರಾರಂಭಿಸಿದ್ದರು. ಹುಬ್ಬಳ್ಳಿಯ ದೇಶಪಾಂಡೆ ಸೆಂಟರ್ ಫಾರ್ ಎಂಟಪ್ರೈನರ್‌ಶಿಪ್ ಅಡಿ ಫೆಲೋಶಿಪ್ ಅಧ್ಯಯನ ನಡೆಸಿದ ಶ್ರಾವಣಿ, ₹1.25 ಲಕ್ಷ ಬಂಡವಾಳದಲ್ಲಿ ಈ ಸಂಸ್ಥೆ ಆರಂಭಿಸಿದ್ದರು. ಇಂದು ವಾರ್ಷಿಕ ₹ 5 ಕೋಟಿ ವಹಿವಾಟು ಹೊಂದಿದೆ.
ಹುಬ್ಬಳ್ಳಿಯ ಟೈಕಾನ್ (TIE) ವತಿಯಿಂದ ವಿದ್ಯಾರ್ಥಿ ಉದ್ಯಮಿ ಪ್ರಶಸ್ತಿ, ಟೈಕಾನ್ ಮುಂಬೈ (TIE) ವತಿಯಿಂದ ಎಮರ್ಜಿಂಗ್ ವುಮನ್ ಎಂಟರ್‌ಪ್ರೆನಿಯರ್ ಆಫ್ ದಿ ಇಯರ್, ಲೋರಿಯಲ್ ಪ್ಯಾರೀಸ್ ಮತ್ತು ಫೆಮಿನಾ ವತಿಯಿಂದ ಮಹಿಳಾ ಉದ್ಯಮಿ, ಸೆಕ್ಯೂರಿಟಿ ಕನ್ಸಲ್ಟೆನ್ಸಿ ಅಸೋಸಿಯೇಶನ್ ಆಫ್ ಇಂಡಿಯಾದಿಂದ ಅಮಿತ್ ಪೋಪಟ್ ಅವಾರ್ಡ್, ವೊಡಾಫೋನ್ ಫೌಂಡೇಷನ್‌ನಿಂದ ವುಮೆನ್ ಆಫ್ ಪ್ಯೂರ್ ವಂಡರ್ ಪುರಸ್ಕಾರದ ಜೊತೆಗೆ ಟಾಟಾ ಸಾಲ್ಟ್‌ನಿಂದ ‘ಮೈನೆ ದೇಶ್ ಕಾ ನಮಕ್ ಖಾಯಾ ಹೈ’ ಸ್ಪರ್ಧೆಯಲ್ಲಿ ಭಾಗವಹಿಸಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ.
- ಕೃಷ್ಣಿ ಶಿರೂರ