ಶಿಶಿರಾ ಎ.ಗೌಡ

ಚಿಕ್ಕಮಗಳೂರು | ಕ್ರಿಕೆಟ್‌

ಭರವಸೆ ಕ್ರಿಕೆಟ್‌ ಆಟಗಾರ್ತಿ ಶಿಶಿರಾ

 

ಕಾಫಿನಾಡಿನ ಶಿಶಿರಾ ಎ.ಗೌಡ ಅವರು ಕಿಕ್ರಿಟ್‌ನಲ್ಲಿ ಭರವಸೆಯ ಹೆಜ್ಜೆ ಗುರುತು ಮೂಡಿಸಿದ್ದಾರೆ. ಚಿಕ್ಕಮಗಳೂರಿನ ಡಾ.ಅಶ್ವತ್ಥ್‌ಬಾಬು–ತ್ರಿವೇಣಿ ದಂಪತಿಯ ಪುತ್ರಿ ಶಿಶಿರಾ ಅವರು ಸಾಧನೆ ಶಿಖರ ಏರಲು ಟೊಂಕಕಟ್ಟಿ ಅಭ್ಯಾಸದಲ್ಲಿ ತೊಡಗಿದ್ದಾರೆ.

 

ಕಾಫಿನಾಡಿನ ಸಾಯಿ ಏಂಜಲ್ಸ್‌ ಶಾಲೆಯಲ್ಲಿ ನರ್ಸರಿಯಿಂದ ಪಿಯುವರೆಗೆ ವ್ಯಾಸಂಗ ಮುಗಿಸಿ, ಬೆಂಗಳೂರಿನ ಅಂಬೇಡ್ಕರ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬಿ.ಇ (ಮಾಹಿತಿ ವಿಜ್ಞಾನ) ಅಧ್ಯಯನದಲ್ಲಿ ತೊಡಗಿದ್ದಾರೆ.

 

ಶಿಶಿರಾ ನಾಲ್ಕನೇ ತರಗತಿಯಲ್ಲಿದ್ದಾಗಲೇ ಕ್ರಿಕೆಟ್‌ನಲ್ಲಿ ಆಸಕ್ತಿ ಬೆಳೆಯಿತು. ಕೋಚಿಂಗ್‌ ಸೇರಿಸುವಂತೆ ಅಪ್ಪನಿಗೆ ಬೇಡಿಕೆ ಇಟ್ಟರು. ಶಿವಮೊಗ್ಗ ವಲಯದ ಮುಖ್ಯ ಕೋಚ್‌ ರಾಮದಾಸ್‌ ಪ್ರಭು ಅವರ ಬಳಿ ಕೋಚಿಂಗ್‌ ಸೇರಿ, ಕ್ರಿಕೆಟ್‌ ಬೇಸಿಕ್‌ ಪಟ್ಟುಗಳನ್ನು ಕಲಿತರು.

 

ದಕ್ಷಿಣ ವಲಯದ ಕರ್ನಾಟಕ ತಂಡ ಉಪ ನಾಯಕಿಯಾಗಿ 16 ವರ್ಷದೊಳಗಿನವರ ತಂಡ ಮುನ್ನಡೆಸಿದ್ದರು. 2017–18ರಲ್ಲಿ 23 ವರ್ಷದೊಳಗಿನವರ ತಂಡಕ್ಕೂ ಆಯ್ಕೆಯಾಗಿದ್ದರು.

 

2018–19ರಲ್ಲಿ ಕರ್ನಾಟಕ ಸೀನಿಯರ್‌ ವುಮೆನ್‌ ರಿಸರ್ವ್‌ ಲಿಸ್ಟ್‌ನಲ್ಲಿ ಶಿಶಿರಾ ಹೆಸರಿತ್ತು. ಈ ಎಡಗೈ ಆಟಗಾರ್ತಿ ಮೂರು ವರ್ಷಗಳಿಂದ ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಪಂದ್ಯ ಆಡಿದ್ದಾರೆ. ಶಿವಮೊಗ್ಗ ಲಯನ್ಸ್‌, ಬೆಳಗಾವಿ ಪ್ಯಾಂಥರ್ಸ್‌ ತಂಡಗಳನ್ನು ಪ್ರತಿನಿಧಿಸಿದ್ದಾರೆ.

 

ಈ ವರ್ಷದ ಕೆಪಿಎಲ್‌ ಚಾಂಪಿಯನ್‌ ಬೆಳಗಾವಿ ತಂಡವನ್ನು ಪ್ರತಿನಿಧಿಸಿದ್ದರು. ಭಾರತ ತಂಡವನ್ನು ಪ್ರತಿನಿಧಿ ಸಬೇಕು ಎಂಬುದು ಗುರಿ. ಮಹೇಂದ್ರ ಸಿಂಗ್‌ ಧೋನಿ ಅಚ್ಚುಮೆಚ್ಚಿನ ಆಟಗಾರ.

 

‘ಆಟಕ್ಕೆ ಅಪ್ಪನೇ ಪ್ರೇರಣೆ, ಚಿಕ್ಕವಳಿದ್ದಾಗ ಅವರೊಂದಿಗೆ ಕ್ರಿಕೆಟ್‌ ನೋಡಲು ಹೋಗುತ್ತಿದ್ದೆ. ಅದರಲ್ಲೇ ಆಸಕ್ತಿ ಬೆಳೆಯಿತು. ಅದರಲ್ಲಿ ಉನ್ನತ ಸಾಧನೆ ಮಾಡಬೇಕೆಂಬ ಗುರಿ ಇದೆ’ ಎಂದು ಶಿಶಿರಾ ಹೇಳುತ್ತಾರೆ.

- ಧನ್ಯಾ ಪ್ರಸಾದ್

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು