ಶರತ್‌ ಪಾಟೀಲ

ಮೈಸೂರು | ನವೋದ್ಯಮ‌

ರೈತರ ಉತ್ಪನ್ನಗಳಿಗೆ ಶೇ 65ರಷ್ಟು ಬೆಲೆ ದೊರಕಿಸಿದ ಉದ್ಯಮಿ

 

ಮೈಸೂರಿನ ಶರತ್‌ ಪಾಟೀಲ 24ರ ತರುಣ. ಎಂಜಿನಿಯರ್‌ ಪದವೀಧರರಾದ ಅವರು ವರ್ಷದ ಹಿಂದೆ ‘ಫಂಡ್‌ ಮೈ ಕ್ರಾಪ್‌’ ಸಂಸ್ಥೆಯನ್ನು ಆರಂಭಿಸಿದ್ದು, ಅದರ ಮೂಲಕ ರೈತರು ಬೆಳೆದ ತರಕಾರಿಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ರೈತರು ಲಾಭಗಳಿಸುವ ಮೂಲಕ ಸ್ವಾವಲಂಬಿಗಳನ್ನಾಗಿಸುವುದು ಅವರ ಸಂಸ್ಥೆಯ ಉದ್ದೇಶ.

 

ರಿಟೇಲರ್‌ಗಳು, ಇ–ಕಾಮರ್ಸ್‌ ಕಂಪನಿಗಳು ರೈತರಿಗೆ ಶೇ 35ರಷ್ಟು ಹಣ ನೀಡಿದರೆ ಶರತ್‌ ಪಾಟೀಲ್‌ ಅವರು ಕೃಷಿ ಉತ್ಪನ್ನಗಳಿಗೆ ಶೇ 65ರಷ್ಟು ಬೆಲೆ ಸಿಗುವಂತೆ ಮಾಡುತ್ತಿದ್ದಾರೆ. ಆನ್‌ಲೈನ್‌ ಬುಕ್ಕಿಂಗ್‌ ಮೂಲಕ ಗ್ರಾಹಕರಿಗೆ ಇವರು ಉತ್ಪನ್ನಗಳನ್ನು ತಲುಪಿಸುತ್ತಿದ್ದಾರೆ. ಅದಕ್ಕೆಂದೇ ವಿಶಿಷ್ಟ ಸಾಫ್ಟ್‌ವೇರ್‌ ರೂಪಿಸಿದ್ದಾರೆ. ರೈತರಿಗೆ ಮಧ್ಯವರ್ತಿಗಳ ಹಾವಳಿ ತಪ್ಪಿದ್ದು, ತಾವೂ ಲಾಭ ಗಳಿಸುತ್ತಿದ್ದಾರೆ.

 

ಸದ್ಯ 16 ಬಗೆಯ ತರಕಾರಿಗಳನ್ನು ಗ್ರಾಹಕರಿಗೆ ತಲುಪಿಸುತ್ತಿದ್ದು, ಈ ತಿಂಗಳಿಂದ ಹಣ್ಣುಗಳನ್ನು ಮಾರಲು ನಿರ್ಧರಿಸಿದ್ದಾರೆ. ಇನ್ನು ಎರಡು ವರ್ಷಗಳಲ್ಲಿ ಮೈಸೂರು ಭಾಗದಲ್ಲಿ ಕನಿಷ್ಠ 100 ರೈತರ ಆದಾಯ ದ್ವಿಗುಣಗೊಳಿಸುವುದರ ಜೊತೆಗೆ 5,000 ಮನೆಗಳಿಗೆ ಉತ್ಪನ್ನಗಳನ್ನು ತಲುಪಿಸುವ ಗುರಿ ಹೊಂದಿದ್ದಾರೆ.

 

‘ತಂದೆ ಅಗ್ರಿಕಲ್ಚರ್‌ ವಿಷಯದಲ್ಲಿ ಎಂ.ಎಸ್ಸಿ ಮಾಡಿದ್ದು, ಅವರೊಂದಿಗೆ ಕಾರ್ಯಕ್ಷೇತ್ರಕ್ಕೆ ಹೋಗಿದ್ದ ವೇಳೆ ರೈತರ ಸಮಸ್ಯೆಗಳು ಅರಿವಿಗೆ ಬಂದವು. ಅವುಗಳನ್ನು ಹೋಗಲಾಡಿಸಲು ಕ್ರಮಕೈಗೊಳ್ಳಬೇಕು ಎಂದು ಚಿಂತಿಸುತ್ತಿದ್ದಾಗ ಹುಟ್ಟಿದ್ದೇ ‘ಫಂಡ್‌ ಮೈ ಕ್ರಾಪ್‌’ ಎನ್ನುತ್ತಾರೆ ಅವರು.

 

- ಎಚ್‌.ಎಸ್‌.ಪವನ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು