ಶರಣಬಸಪ್ಪ ಎಸ್. ಅಂಬಿಸಿಂಗೆ

ಕಲಬುರ್ಗಿ | ನವೋದ್ಯಮ

ನವೋದ್ಯಮ ಮಾರ್ಗದಲ್ಲಿ ‘ಶರಣ‘ರ ಪಥ

 

 

ಶರಣಬಸಪ್ಪ ಶ್ರೀಮಂತ ಅಂಬೆಸಿಂಗೆ ಅವರು ಕಲಬುರ್ಗಿಯ ನವೋದ್ಯಮಿ. ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಜಿನಿಯರಿಂಗ್‌ ಮತ್ತು ಮಾರ್ಕೆಟಿಂಗ್‌ ಫೈನಾನ್ಸ್‌ನಲ್ಲಿ ಎಂಬಿಎ ಪದವೀಧರ. ಓದು ಮುಗಿದ ನಂತರ ಉದ್ಯೋಗಕ್ಕಾಗಿ ಮಹಾನಗರಗಳತ್ತ ಮುಖಮಾಡಲಿಲ್ಲ. ಸ್ವಲ್ಪ‍ ತಾಳ್ಮೆಯಿಂದ ಕಾದರು. ಯಾರದೋ ಕೈಯಲ್ಲಿ ಕೆಲಸ ಮಾಡುವ ಬದಲು ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿ, ತಾವೇ ಏಕೆ ಒಂದು ಸ್ವಂತ ಉದ್ಯಮ ಆರಂಭಿಸಬಾರದು ಎಂದು ಯೋಚಿಸಿದರು. ಹಿರಿಯರಿಂದ ಸಲಹೆ ಪಡೆದು ಇನ್ಫಾರ್ಮೇಷನ್ ಟೆಕ್ನಾಲಜಿ ಮತ್ತು ಬಿಪಿಒ ಉದ್ಯಮದಲ್ಲಿ ತೊಡಗಿದರು. ಉದ್ಯಮ ಕ್ಷೇತ್ರದಲ್ಲಿನ ಅವರ ಶ್ರಮ, ಶ್ರದ್ಧೆ ಹಾಗೂ ಪ್ರತಿಭೆಗೆ ತಕ್ಕ ಪ್ರತಿಫಲ ಒಂದೇ ವರ್ಷದಲ್ಲಿ ಸಿಗಲಾರಂಭಿಸಿತು.

 

ನಾಲ್ಕು ವರ್ಷಗಳ ಹಿಂದೆ ಅವರು ಕಲಬುರ್ಗಿಯಲ್ಲಿ ನವೋದ್ಯಮ ಆರಂಭಿಸಿ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಈಗ 70ಕ್ಕೂ ಹೆಚ್ಚು ಯುವಕ– ಯುವತಿಯರಿಗೆ ಉದ್ಯೋಗ ನೀಡಿದ್ದಾರೆ. ಮಾತ್ರವಲ್ಲ; ಸ್ವಂತ ಉದ್ಯಮ ಸ್ಥಾಪಿಸಲು 12 ಮಂದಿಗೆ ನೆರವಾಗಿದ್ದಾರೆ. ಉದ್ಯಮ ಸ್ಥಾಪಿಸಲು ತಂತ್ರಜ್ಞಾನ, ಅನುಮತಿ, ತೆರಿಗೆ ನಿಯಮ, ಸಂಪನ್ಮೂಲ ಮುಂತಾವುಗಳ ಬಗ್ಗೆ ಅವರು ನವೋದ್ಯಮಿಗಳಿಗೆ ಮಾಹಿತಿ ನೀಡುತ್ತಾರೆ. ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನಲ್ಲಿ 40 ವಿದ್ಯಾರ್ಥಿಗಳನ್ನು ಆಯ್ದುಕೊಂಡು ಅವರಿಗೆ ನವೋದ್ಯಮದ ತರಬೇತಿ ನೀಡುತ್ತಿದ್ದಾರೆ.

 

‘ಕಲ್ಯಾಣ ಕರ್ನಾಟಕ ಹಿಂದುಳಿದಿದೆ ಎಂದು ಹೇಳುತ್ತಲೇ ಬಂದಿದ್ದೇವೆ. ಆದರೆ, ಅದನ್ನು ನಿವಾರಿಸಲು ಏನು ಮಾಡಬೇಕು ಎಂದು ಚಿಂತಿಸುವವರು ಕಡಿಮೆ. ಉದ್ಯೋಗ ಸೃಷ್ಟಿ ಮಾಡಿದರೆ ವಲಸೆ ನಿಲ್ಲಿಸಬಹುದು, ಬಡತನ ನಿವಾರಿಸಬಹುದು, ಈ ಭಾಗದ ಜೀವನ ಮಟ್ಟ ಸುಧಾರಿಸಬಹುದು’ ಎನ್ನುತ್ತಾರೆ ಶರಣಬಸಪ್ಪ.

 

-ಗಣೇಶ ಡಿ. ಚಂದನಶಿವ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು