ಶಾಂತಕುಮಾರ್‌

ಹಾಸನ | ಬೋಸಿಯ ಆಟಗಾರ

ಪದಕಗಳಿಗೆ ಮುತ್ತಿಕ್ಕಿದ 3.3 ಅಡಿ ಎತ್ತರದ ಶಾಂತಕುಮಾರ್‌

 

ಅಂಗವಿಕಲ ನ್ಯೂನತೆ ಮೀರಿ ನಿಂತು ದೇಶ, ವಿದೇಶಗಳಲ್ಲಿ ಪದಕಗಳ ಬೇಟೆಯಾಡುತ್ತಿದ್ದಾರೆ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಳ್ಳಂಗಿ ಗ್ರಾಮದ ಶಾಂತಕುಮಾರ್‌. ಪಿಯುಸಿ ಓದಿರುವ ಇವರು ಇರುವುದು 3.3 ಅಡಿ ಎತ್ತರ ಮಾತ್ರ. ಆದರೆ, ಕೀರ್ತಿಪತಾಕೆ ಬಾನೆತ್ತರಕ್ಕೆ ಹಾರಿದೆ.

 

2017ರಲ್ಲಿ ಕೆನಡಾದಲ್ಲಿ ನಡೆದ ವಿಶ್ವ ಕುಬ್ಜರ ಒಲಿಂಪಿಕ್ಸ್‌ನಲ್ಲಿ ಬೋಸಿಯ (ಚೆಂಡಾಟ) ಕ್ರೀಡೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಈ ಟೂರ್ನಿಯಲ್ಲಿ ಭಾಗವಹಿಸಲು ಪತ್ನಿಯ ಆಭರಣ ಅಡವಿಟ್ಟು, ಸ್ನೇಹಿತರು ಮತ್ತು ನೆಂಟರಿಂದ ಸಾಲ ಪಡೆದು ವಿಮಾನ ಹತ್ತಿದ್ದರು.

 

ಚೆನೈನಲ್ಲಿ ರಾಷ್ಟ್ರೀಯ ಅಂಗವಿಕಲರ ಕ್ರೀಡಾಕೂಟದ ಕುಬ್ಜರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಯಶಸ್ಸಿನ ಯಾತ್ರೆ ಆರಂಭವಾಯಿತು. ಬಳಿಕ ಅಮೆರಿಕ, ಕೆನಡಾ, ಭಾರತದ ದೆಹಲಿ, ಚೆನ್ನೈ, ಅಲಹಾಬಾದ್‌, ಕೋಲ್ಕತ್ತ, ಒಡಿಶಾ ಮತ್ತು ಮುಂಬೈನಲ್ಲಿ ನಡೆದ ವಿವಿಧ ಟೂರ್ನಿಗಳಲ್ಲಿ 13 ಚಿನ್ನ, 10 ಬೆಳ್ಳಿ ಮತ್ತು 15 ಕಂಚಿನ ಪದಕಕ್ಕೆ ಕೊರಳೊಡಿದ್ದಾರೆ. ರಾಷ್ಟ್ರೀಯ, ಅಂತರರಾಷ್ಟ್ರೀಯ ಹಾಗೂ ಪ್ಯಾರಾ ಒಲಿಂಪಿಕ್ಸ್‌ ಕ್ರೀಡಾಕೂಟಗಳಲ್ಲಿ 17 ಪದಕಗಳನ್ನು ಗೆದ್ದಿದ್ದಾರೆ.

 

ಗ್ರಾಮ ಪಂಚಾಯಿತಿಯಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರೂ ಆಗಿರುವ ಇವರು ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾಸಿಕ ₹9,000 ವೇತನದಿಂದ ಜೀವನ ನಡೆಸುತ್ತಿದ್ದಾರೆ.

 

ಬೆಂಗಳೂರಿನಲ್ಲಿ ತರಬೇತಿ ಪಡೆಯಲು ಆರ್ಥಿಕ ಸಮಸ್ಯೆ ಇರುವುದರಿಂದ ಕೊಳ್ಳಂಗಿ ಗ್ರಾಮದಲ್ಲಿಯೇ ಕ್ರೀಡಾಭ್ಯಾಸ ಮಾಡುತ್ತಿದ್ದಾರೆ. 2020ರಲ್ಲಿ ಬ್ಯಾಕಾಂಕ್‌ನಲ್ಲಿ ನಡೆಯುವ ಐವಾಸ್‌ ಕ್ರೀಡಾಕೂಟಕ್ಕೆ ಸಿದ್ಧತೆ ನಡೆಸಿದ್ದಾರೆ.

 

- ಸುನಿಲ್ ಕೆ.ಎಸ್.

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು