ಸಾವಿತ್ರಿ ದ್ಯಾಮಪ್ಪ ಕಡೆತೋಟದ

ನರೇಗಲ್‌ | ಎಲೆಕ್ಟ್ರಿಷಿಯನ್‌

ಮೋಟಾರ್‌ ವೈಂಡಿಂಗ್‌ನಲ್ಲಿ ಸೈ ಎನಿಸಿಕೊಂಡ ಸಾವಿತ್ರಿ

 

ಛಲವಿದ್ದರೆ ಬದುಕು ಅರಳುತ್ತದೆ ಎನ್ನಲು ನರೇಗಲ್‌ ಪಟ್ಟಣದ ಸಾವಿತ್ರಿ ಕಡತೋಟದ (31) ಸಾಕ್ಷಿ. ಕೇವಲ ಎಸ್ಸೆಸ್ಸೆಲ್ಸಿ ಶೈಕ್ಷಣಿಕ ಅರ್ಹತೆ. ಆದರೆ, ಎಲೆಕ್ಟ್ರಿಕಲ್‌ ಆ್ಯಂಡ್‌ ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌ ಪದವೀಧರರು ನಿಬ್ಬೆರಗಾಗುವಂತೆ ಎಲೆಕ್ಟ್ರಿಕಲ್‌ ಉಪಕರಣಗಳ ರಿಪೇರಿ ಮಾಡುತ್ತಾರೆ.

 

ಜೀವನ ನಿರ್ವಹಣೆಗಾಗಿ ಸಣ್ಣಪುಟ್ಟ ರಿಪೇರಿ ಕೆಲಸಗಳನ್ನು ಮಾಡುತ್ತಿದ್ದ ಪತಿ ದ್ಯಾಮಪ್ಪ ಅವರು, ಆರಂಭದಲ್ಲಿ ತರಬೇತಿ ನೀಡಿದರು. ರಿಪೇರಿಗೆ ಬಂದಿದ್ದ ಒಂದೊಂದೇ ವಸ್ತುವನ್ನು ಬಿಚ್ಚುತ್ತಾ, ಜೋಡಿಸುತ್ತಾ ಸಾವಿತ್ರಿ ಈ ಕೆಲಸವನ್ನು ಕರಗತ ಮಾಡಿಕೊಂಡರು.

 

ನಂತರ ರುಡ್‌ಸೆಟ್ ಸಂಸ್ಥೆಯಲ್ಲಿ ಕೌಶಲ ತರಬೇತಿ ಪಡೆದು, ಮೋಟಾರ್‌ ವೈಂಡಿಂಗ್‌ ಮಾಡುವುದನ್ನೂ ಕಲಿತುಕೊಂಡಿದ್ದಾರೆ. ಸಾಮಾನ್ಯವಾಗಿ ಪುರುಷರಷ್ಟೇ ಈ ಕೆಲಸ ಮಾಡುತ್ತಾರೆ. ಆದರೆ, ಗದಗ ಜಿಲ್ಲೆಯಲ್ಲಿ ಮೋಟಾರ್‌ ವೈಂಡಿಂಗ್‌ ಮಾಡುವ ಏಕೈಕ ಮಹಿಳೆ ಎಂಬ ಹೆಗ್ಗಳಿಕೆ ಸಾವಿತ್ರಿ ಅವರದು. ಕೃಷಿಗೆ ಬಳಸುವ 3 ಫೇಸ್ ಮೋಟಾರ್‌, ಸಿಂಗಲ್ ಫೇಸ್ ಮೋಟಾರ್‌ಗಳ ವೈಂಡಿಂಗ್‌ನಲ್ಲಿ ಸೈ ಎನಿಸಿಕೊಂಡಿದ್ದಾರೆ. ‘ಕೌಶಲ ಭಾರತ’ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ನಡೆಸಿದ ವಿಡಿಯೊ ಸಂವಾದದಲ್ಲೂ ಸಾವಿತ್ರಿ ಅವರು ಭಾಗವಹಿಸಿದ್ದಾರೆ.

 

‘ಎಲೆಕ್ಟ್ರಿಕಲ್‌ ವಸ್ತುಗಳ ರಿಪೇರಿ ಕೆಲಸ ನಮ್ಮ ಕುಟುಂಬಕ್ಕೆ ಅನ್ನ ಹಾಕಿದೆ. ಆರ್ಥಿಕ ಬಲ ನೀಡಿದೆ. ಇದರಲ್ಲೇ ಇನ್ನಷ್ಟು ಕೌಶಲ ಪಡೆದುಕೊಳ್ಳಲು ಪ್ರಯತ್ನಿಸುತ್ತೇನೆ’ ಎನ್ನುತ್ತಾರೆ ಸಾವಿತ್ರಿ.

 

- ಜೋಮನ್ ವರ್ಗೀಸ್

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು