ಸಂತೋಷ ಕೌಜಲಗಿ

ಸವದತ್ತಿ | ಕೃಷಿಕ

ನೌಕರಿ ಬಿಟ್ಟು ಕೃಷಿ, ಹೈನುಗಾರಿಕೆಗೆ ಇಳಿದ ಯುವಕ; ರೈತ ಕುಟುಂಬದ ಯುವಕರಿಗೆ ಮಾದರಿ

 

ನೌಕರಿ ಹಿಂದೆ ಬಿದ್ದಿರುವ ರೈತ ಕುಟುಂಬದ ಯುವಕರಿಗೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಜಕಬಾಳ ಗ್ರಾಮದ 27 ವರ್ಷದ ಸಂತೋಷ ಕೌಜಲಗಿ ‘ಪಾಠ’ವಾಗಿದ್ದಾರೆ.

 

ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ ಪದವಿ ಪಡೆದಿರುವ ಸಂತೋಷ, ಹಲವು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿದರು. ಬೆಂಗಳೂರು, ಮಧ್ಯಪ್ರದೇಶ ಹಾಗೂ ದಿಯು– ದಮನ್‌ ಸೇರಿದಂತೆ ವಿವಿಧೆಡೆ ಉದ್ಯೋಗ ಮಾಡಿದರು. ಕೈತುಂಬ ಸಂಬಳ ಸಿಗುತ್ತಿದ್ದರೂ, ಮನಸ್ಸಿನ ನೆಮ್ಮದಿ ಕಾಣೆಯಾಗಿತ್ತು.

 

ಹಣಕ್ಕಿಂತ ನೆಮ್ಮದಿಯೇ ಮುಖ್ಯವೆಂದು ಅರಿತು, ತಾಯ್ನಾಡಿನತ್ತ ಮರಳಿ ಬಂದರು. ಕುಟುಂಬದ 40 ಎಕರೆ ಜಮೀನಿನ ಪೈಕಿ 15 ಎಕರೆ ಜಮೀನಿನಲ್ಲಿ ಬದುಕು ಕಟ್ಟಿಕೊಳ್ಳಲು ಮುಂದಾದರು. ಕಬ್ಬು ಹಾಗೂ ಮೆಕ್ಕೆಜೋಳವನ್ನು ಬಿತ್ತಿ ಬೆಳೆದರು. ಜೊತೆಗೆ 25 ಹಸು, 10 ಕರುಗಳೊಂದಿಗೆ ಹೈನುಗಾರಿಕೆ ಆರಂಭಿಸಿದರು.

 

ಹಾಲು ಮಾರಿ, ಒಂದಿಷ್ಟು ಕಾಸು ಸಂಪಾದಿಸಿದರು. ಅವುಗಳ ಗೋಮೂತ್ರ, ಸೆಗಣಿ ಬಳಸಿ ಸಾವಯವ ಗೊಬ್ಬರ ತಯಾರಿಸಿದರು. ಅದನ್ನೇ ಹೊಲಕ್ಕೆ ಹಾಕಿದರು. ಇದರಿಂದ ಮಣ್ಣಿನ ಸತ್ವ ಹೆಚ್ಚಾಗಿ, ಕಬ್ಬಿನ ಫಸಲು ಹೆಚ್ಚಾಗಿದೆ. ಮೊದಲು ಪ್ರತಿ ಎಕರೆಗೆ 40 ಟನ್‌ ಬೆಳೆಯುತ್ತಿದ್ದ ಕಬ್ಬು, ಈಗ 60ರಿಂದ 70 ಟನ್‌ವರೆಗೆ ಬಂದಿದೆ.

 

ಹೈನುಗಾರಿಕೆಯಿಂದ ಪ್ರತಿ ತಿಂಗಳು ಖರ್ಚು ವೆಚ್ಚ ತೆಗೆದು ಸರಾಸರಿಯಾಗಿ ₹ 50ಸಾವಿರದಿಂದ ₹ 60 ಸಾವಿರ ಆದಾಯ ಬರುತ್ತದೆ. ಕಬ್ಬು, ಮೆಕ್ಕೆಜೋಳದಿಂದ ಪ್ರತಿ ಎಕರೆಗೆ ₹ 1 ಲಕ್ಷ ಲಾಭ ದಕ್ಕುತ್ತದೆ. ಹೈನುಗಾರಿಕೆ ಹಾಗೂ ಕೃಷಿಯಿಂದ ಪ್ರತಿ ತಿಂಗಳು ಸರಾಸರಿಯಾಗಿ ₹ 1.50 ಲಕ್ಷ ಗಳಿಸುತ್ತಿದ್ದಾರೆ.

 

‘ಖಾಸಗಿ ಉದ್ಯೋಗದಲ್ಲಿ ಕಿರುಕುಳ ಹಾಗೂ ಅನಿಶ್ಚಿತತೆಯಿಂದ ಬೇಸರವಾಗಿ ಹೊರಬಂದು, ಕೃಷಿ ಆರಂಭಿಸಿದೆ. ಈಗ ನನ್ನ ಕೈಕೆಳಗೆ 3 ಜನರಿಗೆ ಉದ್ಯೋಗ ನೀಡಿದ್ದೇನೆ. ಅವರಿಗೆ ಪ್ರತಿ ತಿಂಗಳು ಸಂಬಳ ಹಾಗೂ ರೇಷನ್‌ ನೀಡುತ್ತಿದ್ದೇನೆ. ಕೈತುಂಬ ಹಣ ಗಳಿಸುವುದರ ಜೊತೆಗೆ ಮನಸ್ಸಿಗೆ ನೆಮ್ಮದಿಯೂ ಇದೆ’ ಎನ್ನುತ್ತಾರೆ ಸಂತೋಷ ಕೌಜಲಗಿ.

 

- ಶ್ರೀಕಾಂತ ಕಲ್ಲಮ್ಮನವರ
 

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು