ರಾಯಚೂರು | ಸಾವಯವ ಕೃಷಿ
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕು ಜಂಗೀರಾಂಪೂರ ತಾಂಡಾದ ಯುವತಿ ಸಂಗೀತಾ ಪವಾರ, ರೇಷ್ಮೆ ಕೃಷಿಯಲ್ಲಿ ಯಶಸ್ಸು ಕಂಡವರು. ಯಾದಗಿರಿ ಜಿಲ್ಲೆ ಸುರಪುರದಲ್ಲಿ ಎಂ.ಟೆಕ್ ಓದುತ್ತಲೇ ಕೃಷಿ ಮುಂದುವರಿಸಿದ್ದಾರೆ.
ಎಂಟು ವರ್ಷಗಳ ಹಿಂದೆ ಶೇಂಗಾ, ತೊಗರಿ ಬೆಳೆಯುತ್ತಿದ್ದರು. ನೆರೆಹೊರೆ ರೈತರನ್ನು ನೋಡಿ ತಂದೆ ವಾಸು ಪವಾರ ಮತ್ತು ಅಣ್ಣ ಮಾಧು ಪವಾರ ಅವರ ಜೊತೆಗೆ ರೇಷ್ಮೆ ಕೃಷಿ ಆರಂಭಿಸಿದರು. ಮೂರು ವರ್ಷಗಳಿಂದ ರೇಷ್ಮೆ ಮೊಟ್ಟೆಯಿಂದ ಮರಿಗಳನ್ನು (ಹ್ಯಾಚರಿಂಗ್) ತಯಾರಿಸಿ ರೇಷ್ಮೆ ಗೂಡು ಮಾಡುವ ರೈತರಿಗೆ ಮಾರಾಟ ಮಾಡುತ್ತಿದ್ದಾರೆ. ನಾಲ್ಕು ಎಕರೆಯಲ್ಲಿ ರೇಷ್ಮೆ ಬೆಳೆದಿದ್ದು, ಪ್ರತಿವರ್ಷ ₹20 ಲಕ್ಷಕ್ಕೂ ಅಧಿಕ ಲಾಭ ಪಡೆಯುತ್ತಿರುವುದು ವಿಶೇಷ.
‘ಉನ್ನತ ಶಿಕ್ಷಣ ಪಡೆದು ನಿರಾಸೆ ಅನುಭವಿಸಿ ಮತ್ತೆ ಕೃಷಿ ಕಡೆಗೆ ಬರುತ್ತಿರುವ ಬಹಳಷ್ಟು ಜನರನ್ನು ನೋಡಿದ್ದೇನೆ. ನಾನು ಕೃಷಿಯಲ್ಲಿ ಯಶಸ್ಸನ್ನು ಕಂಡಿದ್ದೇನೆ. ಶೈಕ್ಷಣಿಕ ಅರ್ಹತೆಯೂ ಬೇಕು ಎನ್ನುವ ಕಾರಣದಿಂದ ಎಂ.ಟೆಕ್ ಓದುತ್ತಿದ್ದೇನೆ. ಸಾವಯವ ಗೊಬ್ಬರ ಬಳಕೆ ಮಾಡಿಕೊಂಡು ಕೃಷಿಯಲ್ಲಿ ಇನ್ನಷ್ಟು ಕಾರ್ಯ ಮಾಡಬೇಕು ಎನ್ನುವ ಆಸೆ ಇದೆ. ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಆಕಾಂಕ್ಷೆ ಇದೆ. ಇದಕ್ಕಾಗಿ ತರಬೇತಿ ಪಡೆಯುತ್ತೇನೆ. ರಜಾ ದಿನಗಳಲ್ಲಿ ತಪ್ಪದೇ ಗ್ರಾಮಕ್ಕೆ ಹೋಗಿ ಕೃಷಿ ಮಾಡುತ್ತೇನೆ’ ಎಂಬುದು ಅವರ ಮನದಾಳ.
-ನಾಗರಾಜ ಚಿನಗುಂಡಿ