ಸಂಯುಕ್ತಾ ಪುಲಿಗಲ್‌

ಬೆಂಗಳೂರು | ಅನುವಾದಕಿ

ಉಪನ್ಯಾಸದಾಚೆಯ ಲೋಕ ವಿಹಾರ ಅನುವಾದಕಿ

 

ಅಡೋಬಿ ಸಾಫ್ಟ್‌ವೇರ್‌ ಕಂಪನಿಯಲ್ಲಿ ಇನ್‌ಸ್ಟ್ರಕ್ಷನ್‌ ಡಿಸೈನರ್‌ ಆಗಿರುವ ಸಂಯುಕ್ತಾ ಪುಲಿಗಲ್‌ ಬೆಂಗಳೂರಿನವರು. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಎಂ.ಎ ಪದವಿ ಗಳಿಸಿರುವ ಅವರ ಅನುವಾದ ಕೆಲಸಗಳಿಗೆ ಕನ್ನಡ ಶಿಕ್ಷಕರಾದ ಅವರ ತಂದೆಯೇ ಪ್ರೇರಣೆ. ಎಂ.ಎ ಓದಿದವರಿಗೂ ಸಾಫ್ಟ್‌ವೇರ್‌ ಕೆಲಸವೇ ಎಂಬ ಹುಬ್ಬೇರಿಸಬೇಡಿ. ಅವರು ಆಯ್ಕೆ ಮಾಡಿಕೊಂಡ ಕ್ಷೇತ್ರ ಕುತೂಹಲಗಳ ಕಣಜ. 

 

ಉಪನ್ಯಾಸಕಿಯಾಗುವ ಬದಲು ಅದೇ ಕ್ಷೇತ್ರದ ಮತ್ತೊಂದು ಮಜಲಿಗೆ ತೆರಳಿ ಕನ್ನಡ ಭಾಷೆಗೆ ಒಂದಿಷ್ಟು ಕೊಡುಗೆ ನೀಡುವ ಬಯಕೆ. ಬೋಧನಾ ವೃತ್ತಿಗೆ ಹೋಗುವ ಬದಲಿಗೆ ಈ ಕ್ಷೇತ್ರದಲ್ಲಿ ಹೊಸದಾಗಿ ಸೇರಿಕೊಳ್ಳುತ್ತಿರುವ ಕೆಲವು ಅವಕಾಶಗಳನ್ನು ಯಾಕೆ ಬಳಸಿಕೊಳ್ಳಬಾರದು ಎಂಬ ಆಲೋಚನೆಯ ಫಲವಾಗಿ ಸಾಫ್ಟ್‌ವೇರ್‌ ಕಂಪನಿಯ ಕಂಟೆಂಟ್‌ ರೈಟರ್‌ ಆಗಿ ಸೇರಿಕೊಂಡು ಇಂದು ಇನ್‌ಸ್ಟ್ರಕ್ಷನ್‌ ಡಿಸೈನರ್‌ ಆಗಿದ್ದಾರೆ.

 

ಹಲವು ಭಾಷೆ ಕಲಿಯುವುದು, ಅನುವಾದ ಮಾಡುವುದು ಸಂಯುಕ್ತಾ ಪಾಲಿಗೆ ಒಂದು ಆಟ. ಅದರ ಫಲವಾಗಿಯೇ ಸಾಫ್ಟ್‌ವೇರ್ ಕಂಪನಿಯ ಕೆಲಸದ ಜತೆಗೇ ಅನುವಾದದತ್ತಲೂ ಆಸಕ್ತಿ. ‘ಮಿರಾಕಲ್‌ ಇನ್‌ ಆಂಡೀಸ್’ ಕೃತಿ ಓದಿದಾಗ ಪ್ರೇರಣೆದಾಯಕ ಕಥೆಯನ್ನು ಕನ್ನಡಿಗರಿಗೂ ಒದಗಿಸುವ ತುಡಿತ. ಅದರ ಫಲವೇ ‘ಪರ್ವತದಲ್ಲಿ ಪವಾಡ’ ಕೃತಿ. ಇತಿಹಾಸದ ಪುಟಗಳಲ್ಲಿ ಹುದುಗಿದ ಸುಂದರ ಕಥಾನಕದ ಪರಿಚಯವೇ ‘ರೆಬೆಲ್‌ ಸುಲ್ತಾನರು’ ಕೃತಿ.

 

‘ಅವಧಿ’ ಆನ್‌ಲೈನ್‌ ಮ್ಯಾಗಜಿನ್‌ಗೆ ಬರೆಯುತ್ತಿದ್ದ ಅಂಕಣಗಳ ಸಂಗ್ರಹ ‘ಲ್ಯಾಪ್‌ಟಾಪ್ ಪರದೆಯಾಚೆ’. ಚೈನೀಸ್‌, ಫ್ರೆಂಚ್‌ ಭಾಷೆಗಳ ಅಧ್ಯಯನವೂ ಪ್ರಗತಿಯಲ್ಲಿ. ವಿವಿಧ ಭಾಷೆಗಳ ಕೃತಿಗಳ ಸೊಬಗನ್ನು ಕನ್ನಡಕ್ಕೆ ಪರಿಚಯಿಸುವ ಹಂಬಲಕ್ಕೆ ಸಾಕ್ಷಿಯಾಗಲಿವೆ ಇನ್ನಷ್ಟು ಕೃತಿಗಳು.

 

- ಪ್ರವೀಣ್‌ ಕುಮಾರ್ ಪಿ.ವಿ.

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು