ಚನ್ನಪಟ್ಟಣ | ಯೋಗ ತರಬೇತುಗಾರ್ತಿ
ರಾಮನಗರ ಜಿಲ್ಲೆಯ ಚನ್ನಪಟ್ಟಣ ಎಂದ ಕೂಡಲೇ ಥಟ್ಟನೆ ನೆನಪಾಗುವುದು ಗೊಂಬೆಗಳು. ಈ ಗೊಂಬೆನಾಡಿನಲ್ಲಿ ಯೋಗದ ಕಂಪು ಪಸರಿಸುತ್ತಿರುವ ಪ್ರತಿಭೆ ವಿ. ಸಮೀಕ್ಷಾ. ಚನ್ನಪಟ್ಟಣದ ಸೌಭಾಗ್ಯ ಯೋಗ ತರಬೇತಿ ಕೇಂದ್ರದ ಮೂಲಕ ಸಮೀಕ್ಷಾ ನೂರಾರು ಆಸಕ್ತರಿಗೆ ತರಬೇತಿ ನೀಡುತ್ತಾ ಬಂದಿದ್ದಾರೆ. ಅವರ ಶಿಷ್ಯಂದಿರಲ್ಲಿ ಹಲವರು ಈಗಾಗಲೇ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾರೆ. ಸಮೀಕ್ಷಾ ಓದಿದ್ದು ಎಂ.ಟೆಕ್.
ಸಮೀಕ್ಷಾರ ತಾಯಿ ಸೌಭಾಗ್ಯ ಸ್ವತಃ ಯೋಗ ತರಬೇತುದಾರರು. ಹೀಗಾಗಿ ಅವರಿಗೆ ಬಾಲ್ಯದಲ್ಲೇ ಯೋಗಾಭ್ಯಾಸ ಆರಂಭವಾಯಿತು. ಮೊದಲ ಪದಕ ಗೆದ್ದು ಸಂಭ್ರಮಿಸಿದಾಗ ಸಮೀಕ್ಷಾಗೆ 5 ವರ್ಷ ವಯಸ್ಸು.
ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಇ. ಹಾಗೂ ಮೆಷಿನ್ ಡಿಸೈನ್ ವಿಷಯದಲ್ಲಿ ಎಂ.ಟೆಕ್ ಓದಿರುವ ಸಮೀಕ್ಷಾಗೆ ಯೋಗವೇ ವೃತ್ತಿ–ಪ್ರವೃತ್ತಿ ಆಗಿದೆ. 2008ರಿಂದ ಅವರು 380ಕ್ಕೂ ಹೆಚ್ಚು ರಾಷ್ಟ್ರೀಯ–ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ. ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 2019ರ ಜೂನ್‌ನಲ್ಲಿ ಬಲ್ಗೇರಿಯಾದಲ್ಲಿ ನಡೆದ ನಾಲ್ಕನೇ ವಿಶ್ವ ಯೋಗ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನ ಮತ್ತು ಕಂಚಿನ ಪದಕ ಗೆದ್ದಿದ್ದಾರೆ. ಕಳೆದ ವರ್ಷ ಮಲೇಷ್ಯಾದಲ್ಲಿ ನಡೆದ ಏಳನೇ ಅಂತರರಾಷ್ಟ್ರೀಯ ಯೋಗ ಉತ್ಸವದಲ್ಲಿ ಅವರು ಬೆಳ್ಳಿ ಹಾಗೂ ರಜತ ಪದಕ ಗೆದ್ದಿದ್ದರು.
ಕಳೆದೊಂದು ದಶಕದಿಂದ ತರಬೇತುದಾರರಾಗಿದ್ದು, ಕೇಂದ್ರ ಸರ್ಕಾರದಿಂದ ತರಬೇತಿ ಮಾನ್ಯತೆ ಪತ್ರವೂ ದೊರೆತಿದೆ. ಅವರು ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿದ್ದಾರೆ. ನೆರೆ ಸಂತ್ರಸ್ತರಿಗೆ ಸಹಾಯಹಸ್ತ, ಅಂಧ ಮಕ್ಕಳಿಗೆ ಪರೀಕ್ಷೆ ಬರೆಯಲು ನೆರವು, ಕೈದಿಗಳಿಗಾಗಿ ಯೋಗ ಶಿಬಿರ ಆಯೋಜನೆ ಮಾಡಿದ್ದಾರೆ. ‘ಯೋಗ ಕೇವಲ ಸ್ಪರ್ಧೆ–ಹವ್ಯಾಸಕ್ಕೆ ಮಾತ್ರ ಸೀಮಿತ ಅಲ್ಲ. ಉತ್ತಮ ಆರೋಗ್ಯಕ್ಕೆ ಅತ್ಯವಶ್ಯವಾಗಿ ಬೇಕಾದ ವ್ಯಾಯಾಮ’ ಎನ್ನುವ ಅವರು ಮುಂದೆ ಯೋಗ ವಿಷಯದಲ್ಲಿಯೇ ಪಿಎಚ್.ಡಿ ಮಾಡುವ ಗುರಿ ಹೊಂದಿದ್ದಾರೆ.
- ಆರ್. ಜಿತೇಂದ್ರ