ತುಮಕೂರು | ಭರತನಾಟ್ಯ ಕಲಾವಿದ
‘ನನ್ನ ಅಪ್ಪ ದಾವಣಗೆರೆಯಲ್ಲಿ ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಆಗ ಪಕ್ಕದ ಮನೆಯಲ್ಲಿ ಭರತನಾಟ್ಯ ಕಲಿಸುತ್ತಿದ್ದರು. ಆಗಲೇ ಅಪ್ಪನಿಗೆ ನನ್ನ ಭರತನಾಟ್ಯ ಕಲಾವಿದನನ್ನಾಗಿ ರೂಪಿಸಬೇಕು ಎನ್ನುವ ಆಸೆ ಮೊಳೆಯಿತು. ಅಪ್ಪನ ಆ ಆಸೆ ನನ್ನ ಇಲ್ಲಿಗೆ ತಂದು ನಿಲ್ಲಿಸಿದೆ’. ಹೀಗೆ ಹೇಳುತ್ತ ಮುಗುಳ್ನಗುವರು ತುಮಕೂರಿನ ಮಹಾಲಕ್ಷ್ಮಿ ಬಡಾವಣೆಯ ಎಸ್.ವಿಕಾಸ್.
23 ವರ್ಷದ ವಿಕಾಸ್, ತುಮಕೂರಿನ ಎಸ್‌ಐಟಿಯಲ್ಲಿ ಬಿಇ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವಿಕಾಸ್ ತಂದೆ ಷಣ್ಮುಖಪ್ಪ ಬೆಸ್ಕಾಂ ಇಲಾಖೆಯಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ.
ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭರತನಾಟ್ಯ ಪ್ರದರ್ಶಿಸುವ ಮೂಲಕ ಜಿಲ್ಲೆಯ ಕೀರ್ತಿಯನ್ನು ವಿಕಾಸ್ ಎತ್ತಿ ಹಿಡಿದಿದ್ದಾರೆ. ದೇಶದ ನಾನಾ ಭಾಗಗಳಲ್ಲಿ 300ಕ್ಕೂ ಹೆಚ್ಚು ಕಛೇರಿಗಳನ್ನು ನಡೆಸಿಕೊಟ್ಟಿದ್ದಾರೆ. 2019ರಲ್ಲಿ ಆತ್ಮಶ್ರೀ ಕನ್ನಡ ಸಂಸ್ಕೃತಿ ಸಂಸ್ಥೆಯಿಂದ ‘ನೃತ್ಯ ರತ್ನ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ‘ಮಧುರ ಮಧುರವೀ ಮಂಜುಳ ಗಾನ’ ಕಾರ್ಯಕ್ರಮದಲ್ಲಿ ಮೂರು ಬಾರಿ ಪಾಲ್ಗೊಂಡಿದ್ದಾರೆ. ಸಿಂಗಪುರದಲ್ಲಿ 2010ರಲ್ಲಿ ನಡೆದ ವಿಶ್ವ ಕನ್ನಡ ಸಂಸ್ಕೃತಿ ಉತ್ಸವದಲ್ಲಿ ಪ್ರದರ್ಶನ ನೀಡುವ ಮೂಲಕ ಅಂತರರಾಷ್ಟ್ರೀಯ ವೇದಿಕೆಗೂ ಕಾಲಿಟ್ಟಿದ್ದಾರೆ.
ಹಂಪಿ ಉತ್ಸವ, ಚೆನ್ನೈನ ನಟರಾಜೋತ್ಸವ, ಮೈಸೂರು ದಸರಾ ಉತ್ಸವ...ಹೀಗೆ ವಿಕಾಸ್ ಕಲಾಪ್ರದರ್ಶನ ನೀಡಿರುವ ಪ್ರಮುಖ ವೇದಿಕೆಗಳ ಪಟ್ಟಿ ಬೆಳೆಯುತ್ತದೆ.
‘ಭವಿಷ್ಯದಲ್ಲಿ ಈ ಕ್ಷೇತ್ರದಲ್ಲಿಯೇ ಮತ್ತಷ್ಟು ಸಾಧಿಸಬೇಕು ಎನ್ನುವ ಹಂಬಲ ಇದೆ. ಖಂಡಿತ ಸಾಧಿಸಿಯೇ ತೀರುವೆ’ ಎನ್ನುವ ಅದಮ್ಯ ವಿಶ್ವಾಸ ವ್ಯಕ್ತಪಡಿಸುವರು ವಿಕಾಸ್.
-ಡಿ.ಎಂ.ಕುರ್ಕೆ ಪ್ರಶಾಂತ