ಎಸ್‌.ಎಸ್. ಪುಷ್ಪಾ

ಬೆಂಗಳೂರು | ಪಶು ಸಂಗೋಪನೆ

ಹಂದಿ ಹಿರಿಮೆ ಮಂದಿಯ ಮುಂದೆಲ್ಲ ಗರಿಮೆ

 

 

ಹುಟ್ಟಿದ್ದ ಕೃಷಿ ಕುಟುಂಬ, ಕೃಷಿ ಪದವಿ ಪಡೆಯಬೇಕೆಂಬ ಆಸೆ ಕೈಗೂಡಲಿಲ್ಲ. ಎಂಜಿನಿಯರಿಂಗ್ ಸ್ನಾತಕೋತ್ತರ ಪದವಿ ಪಡೆದುಕೊಂಡರೂ ಕೃಷಿ ಮತ್ತು ಪಶುಸಂಗೋಪನೆಯಲ್ಲಿ ಆಸಕ್ತಿ ಕುಂದಲಿಲ್ಲ. ಆ ಸೆಳೆತವೇ ಸರ್ಜಾಪುರ ಸಮೀಪದ ಗೋಪಸಂದ್ರದ ಎಸ್‌.ಎಸ್. ಪುಷ್ಪಾ ಅವರನ್ನು ಅದೇ ಕ್ಷೇತ್ರಕ್ಕೆ ಎಳೆದು ತಂದಿದೆ. ಅವರೀಗ ವರ್ಷಕ್ಕೆ ₹50 ಲಕ್ಷ ಆದಾಯ ಗಳಿಸುತ್ತಿರುವ ರೈತ ಮಹಿಳೆ.

 

ಸ್ನಾತಕೋತ್ತರ ಪದವಿ ಮುಗಿಸುವಷ್ಟರಲ್ಲೇ (2009) ಪುಷ್ಪಾ ಮದುವೆ ಆಯಿತು. ಬೊಧನಾ ವೃತ್ತಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಯೋಚನೆ ಮಾಡಿದ್ದರು. ಪತಿ ನಾಗೇಶ್ ಅವರು ಕೋಳಿ ಸಾಕಾಣಿಕೆ ಜತೆಗೆ ಹಂದಿಗಳ ಸಣ್ಣ ಫಾರಂ ಆರಂಭಿಸಿದ್ದರು. ಕೈಗಾರಿಕೆಯಲ್ಲೂ ತೊಡಗಿಕೊಂಡಿರುವ ನಾಗೇಶ್, ಹಂದಿ ಫಾರಂನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಆಗಿರಲಿಲ್ಲ. ಪರಿಣಾಮವಾಗಿ ರೋಗಕ್ಕೆ ತುತ್ತಾಗಿ 250 ಹಂದಿಗಳು ಮೃತಪಟ್ಟವು. ಆ ಸಂದರ್ಭದಲ್ಲಿ ಸುಮಾರು ₹1 ಕೋಟಿಯಷ್ಟು ಸಾಲದ ಹೊರೆ ಕುಟುಂಬದ ಮೇಲೆ ಬಿದ್ದಿತು.

 

ಮೊದಲಿನಿಂದಲೂ ಕೃಷಿಯಲ್ಲಿ ಆಸಕ್ತಿ ಹೊಂದಿದ್ದ ಪುಷ್ಪಾ, ಈ ಕ್ಷೇತ್ರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮನಸು ಮಾಡಿದರು. ಕುಟುಂಬವನ್ನು ಸಾಲದಿಂದ ಮೇಲೆತ್ತಿದರು. ಅದಕ್ಕೆ ಪತಿ ನಾಗೇಶ್‌ ಅವರು ಬೆನ್ನೆಲುಬಾಗಿ ನಿಂತರು. ಇಬ್ಬರೂ ಸೇರಿ ಮೂರು ಎಕರೆ ಜಾಗದಲ್ಲಿ 250 ಹಂದಿಗಳನ್ನು ಸಾಕುವ ಮೂಲಕ ಫಾರಂ ಪುನರ್ ಸ್ಥಾಪಿಸಿದ್ದಾರೆ. ಈ ಫಾರಂನಲ್ಲೀಗ 2,500 ಹಂದಿಗಳಿವೆ. 25 ಜನರಿಗೆ ಉದ್ಯೋಗವನ್ನೂ ಕೊಟ್ಟಿದ್ದಾರೆ. 

 

20 ಸಾವಿರ ಬಾಯ್ಲರ್ ಕೋಳಿಗಳ ಫಾರಂ ಕೂಡ ಇದೆ. ಮನೆಗೆ ಮಾಂಸಕ್ಕಾಗಿ 50 ನಾಟಿ ಕೋಳಿಗಳನ್ನೂ ಸಾಕಿದ್ದಾರೆ. ಹಂದಿ ಸಾಕಾಣಿಕೆಯಲ್ಲಿ ಈಗ ಪುಷ್ಪಾ ಅವರು ಪರಿಣತರು. ಅವುಗಳಿಗೆ ರೋಗ ಬರದಂತೆ ಚುಚ್ಚುಮದ್ದು ನೀಡುವುದು ಸೇರಿ ಎಲ್ಲಾ ರೀತಿಯ ಆರೈಕೆಯನ್ನೂ ಸ್ವತಃ ಅವರೇ ನೋಡಿಕೊಳ್ಳುತ್ತಾರೆ. ಪತಿ ನಾಗೇಶ್ ಅವರು ಹಂದಿಗಳ ಮಾರುಕಟ್ಟೆಯ ವಹಿವಾಟು ನೋಡಿಕೊಳ್ಳುತ್ತಾರೆ. ಇಬ್ಬರೂ ಸೇರಿ ಹಂದಿ ಫಾರಂ ಅನ್ನು ಗಟ್ಟಿಗೊಳಿಸಿದ್ದಾರೆ.

 

ಒಟ್ಟು ಎಂಟು ಎಕರೆ ಜಮೀನು ಹೊಂದಿರುವ ಪುಷ್ಪಾ ಅವರು ಅರಣ್ಯ ಕೃಷಿಯನ್ನೂ ಮಾಡುತ್ತಿದ್ದಾರೆ. ಹೆಬೇವು, ಮಹಾಗನಿ, ನೇರಳೆ, ಅಂಜೂರದ ಗಿಡಗಳನ್ನು ಬೆಳೆಸಿದ್ದಾರೆ. ಒಂದೂವರೆ ಎಕರೆಯಲ್ಲಿ ತೊಂಡಕಾಯಿ ತೋಟ, 50 ರೀತಿಯ ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ.

 

– ವಿಜಯ್‌ಕುಮಾರ್ ಎಸ್.ಕೆ.

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು