ಬೆಂಗಳೂರು | ಈಜುಪಟು
ಬೆಂಗಳೂರಿನ ಹುಡುಗ ಎಸ್.ಪಿ.ಲಿಖಿತ್, ಒಂಬತ್ತನೇ ವಯಸ್ಸಿನಲ್ಲಿ ಈಜು ಕಲಿಯಲು ಶುರುಮಾಡಿದ್ದರು. ಆರೋಗ್ಯ ಕಾಪಾಡಿಕೊಳ್ಳುವ ಉದ್ದೇಶದಿಂದ ಈಜುಕೊಳಕ್ಕೆ ಧುಮುಕಿದ್ದ ಅವರು ಕ್ರಮೇಣ ವಯೋವರ್ಗದ ಚಾಂಪಿಯನ್‌ಷಿಪ್‌ಗಳಲ್ಲಿ ಪದಕಗಳನ್ನು ಕೊರಳಿಗೇರಿಸಿಕೊಳ್ಳುತ್ತ ಸಾಗಿದರು. 100 ಮೀಟರ್ಸ್ (ಗುಂಪು-1) ಹಾಗೂ 50 ಮೀಟರ್ಸ್ (ಗುಂಪು-2) ಬ್ರೆಸ್ಟ್‌ಸ್ಟ್ರೋಕ್ ವಿಭಾಗಗಳಲ್ಲಿ ರಾಷ್ಟ್ರೀಯ ದಾಖಲೆಯನ್ನೂ ಬರೆದಿದ್ದರು. ಹೀಗೆ ಯಶಸ್ಸಿನ ಹಾದಿಯಲ್ಲಿ ಮುಂದಡಿ ಇಡುತ್ತಿರುವಾಗಲೇ ಗಾಯದ ಸಮಸ್ಯೆಯಿಂದ ಬಳಲಿದ ಲಿಖಿತ್, 19ರ ಹರೆಯದಲ್ಲೇ ಕ್ರೀಡಾಬದುಕಿಗೆ ವಿದಾಯ ಹೇಳಲು ನಿರ್ಧರಿಸಿಬಿಟ್ಟಿದ್ದರು.
ನಾಲ್ಕು ವರ್ಷಗಳ ಕಾಲ ನರಕಯಾತನೆ ಅನುಭವಿಸಿದ್ದ ಅವರು ಈ ಅವಧಿಯಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರಿಯಾದಲ್ಲಿ ತರಬೇತಿ ಪಡೆದರು. ಹೀಗಿದ್ದರೂ ಪ್ರಯೋಜನವಾಗಲಿಲ್ಲ. ಇದರಿಂದ ಹತಾಶರಾಗಿದ್ದ ಅವರಿಗೆ ಮರುಜನ್ಮ ನೀಡಿದ್ದು ಬೆಂಗಳೂರಿನ ನೆಟ್ಟಕಲ್ಲಪ್ಪ ಈಜು ಕೇಂದ್ರ (ಎನ್‌ಎಸಿ).
ಎನ್‌ಎಸಿಗೆ ಸೇರಿದ ಬಳಿಕ ಲಿಖಿತ್ ಬದುಕಿಗೆ ಹೊಸ ತಿರುವು ಲಭಿಸಿತು. ಪಾರ್ಥ ವಾರಣಾಸಿ, ಲೋಕೇಶ್ ಮತ್ತು ನಿರೂಪ್ ಅವರು ಹೇಳಿಕೊಟ್ಟ ಕೌಶಲಗಳನ್ನು ಮೈಗೂಡಿಸಿಕೊಂಡ ಲಿಖಿತ್, 2019ರ ಆರಂಭದಲ್ಲಿ ನಡೆದಿದ್ದ ಖೇಲೋ ಇಂಡಿಯಾ ಯೂತ್ ಕ್ರೀಡಾಕೂಟದಲ್ಲಿ ಆರು ಪದಕಗಳನ್ನು ಗೆದ್ದರು. ಇದರಲ್ಲಿ ಐದು ಚಿನ್ನದ ಪದಕಗಳು ಸೇರಿದ್ದವು.
ಬೆಂಗಳೂರಿನಲ್ಲಿ ನಡೆದಿದ್ದ ಏಷ್ಯನ್ ವಯೋವರ್ಗ ಈಜು ಚಾಂಪಿಯನ್‌ಷಿಪ್ ಮತ್ತು ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲೂ ಪದಕಗಳ ಬೇಟೆಯಾಡಿದ್ದ ಅವರು ಈಗ ಟೋಕಿಯೊ ಒಲಿಂಪಿಕ್ಸ್ ಅರ್ಹತೆಯತ್ತ ಚಿತ್ತ ನೆಟ್ಟಿದ್ದಾರೆ.
- ಜಿ.ಶಿವಕುಮಾರ