ಎಸ್.ರುದ್ರೇಶ್ ಆಚಾರ್

ಶಿವಮೊಗ್ಗ | ಶಿಕ್ಷಣ

ಬಹುಮುಖ ಪ್ರತಿಭೆಯ ಶಿಕ್ಷಕ

 

ಸೂಗೂರು ಸಮೀಪದ ಕ್ಯಾತಿನಕೊಪ್ಪದ ಎಸ್.ರುದ್ರೇಶ್ ಆಚಾರ್ ಅವರದು ಬಹುಮುಖ ಪ್ರತಿಭೆ. ಶ್ರೀಪತಿ ಆಚಾರ್ ಮತ್ತು ಸುವರ್ಣಮ್ಮ ದಂಪತಿ ಪುತ್ರ. ಕನ್ನಡ, ಹಿಂದಿ, ಸಂಸ್ಕೃತ, ಪತ್ರಿಕೋದ್ಯಮ, ರಾಜ್ಯಶಾಸ್ತ್ರ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಶಿವಮೊಗ್ಗದ ಖಾಸಗಿ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

 

ಬಾಲ್ಯದಲ್ಲೇ ಅವರು ರೂಪಿಸಿದ ವಿಜ್ಞಾನ ಮಾದರಿಗೆ ದಕ್ಷಿಣ ಭಾರತ ವಲಯಮಟ್ಟದ ಪ್ರೌಢಶಾಲೆಗಳ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಪ್ರಥಮ ಸ್ಥಾನ ದೊರೆತಿತ್ತು. ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂ ನಗದು ಪುರಸ್ಕಾರ ನೀಡಿ ಗೌರವಿಸಿತ್ತು. ಹಾಡುಗಾರಿಕೆ, ಚಿತ್ರಕಲೆಯಲ್ಲಿ ಛಾಪು ಮೂಡಿಸಿರುವ ಅವರು ಬರವಣಿಗೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಕವನ, ಪದ್ಯ ರಚನೆ, ಕಥೆ ಕಾದಂಬರಿ, ನಾಟಕ ರಚಿಸಿದ್ದಾರೆ. ಕನ್ನಡದಲ್ಲಿ ಸುಮಾರು 150 ಹಾಡುಗಳನ್ನು ಬರೆದಿದ್ದಾರೆ.

 

ವಿದ್ಯಾರ್ಥಿಗಳು, ಸಾರ್ವಜನಿಕರಲ್ಲಿ ಮೂಢನಂಬಿಕೆಗಳ ವಿರುದ್ಧ ನಿರಂತರ ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ. ಶಾಲಾ ಕಾಲೇಜುಗಳಲ್ಲಿ, ಸಾರ್ವಜನಿಕ ವೇದಿಕೆಗಳಲ್ಲಿ ಪವಾಡ ಬಯಲು ಕಾರ್ಯಕ್ರಮ, ಬೀದಿ ನಾಟಕಗಳನ್ನು ನಡೆಸಿಕೊಟ್ಟಿದ್ದಾರೆ. ತಾವೇ ರಚಿಸಿದ ವಿಜ್ಞಾನ ಗೀತೆಗಳನ್ನು ಹಾಡಿ, ಪತ್ರಿಕೆಗಳಲ್ಲಿ ವೈಚಾರಿಕ ಬರಹಗಳನ್ನು ಪ್ರಕಟಿಸಿದ್ದಾರೆ.

 

ಬಿಡುವಿನ ಸಮಯದಲ್ಲಿ ಗಣಪತಿ ವಿಗ್ರಹ ಮಾಡುವುದು, ಚಿತ್ರಕಲೆ, ಅಲಂಕಾರಿಕ ವಸ್ತುಗಳ ರಚನೆಯಲ್ಲೂ ತೊಡಗಿಸಿಕೊಳ್ಳುತ್ತಾರೆ. ಛಾಯಾಗ್ರಾಹಕರಾಗಿ ಅಮೂಲ್ಯ ಚಿತ್ರಗಳನ್ನು ಸೆರೆಹಿಡಿದಿದ್ದಾರೆ. ಇವರ ಬಹುಮುಖ ಪ್ರತಿಭೆ ಗುರುತಿಸಿದ ಹಲವು ಸಂಘ–ಸಂಸ್ಥೆಗಳು ಪ್ರಶಸ್ತಿ ನೀಡಿ ಪುರಸ್ಕರಿಸಿವೆ. ಆಕಾಶವಾಣಿ, ದೂರದರ್ಶನಗಳಲ್ಲೂ ಅವರ ಹಲವು ಕಾರ್ಯಕ್ರಮಗಳು ಬಿತ್ತರವಾಗಿವೆ. ಪತ್ನಿ ಕಲಾವತಿ ಅವರ ಕಾರ್ಯಗಳಿಗೆ ಸದಾ ಸ್ಫೂರ್ತಿ. 

 

- ಚಂದ್ರಹಾಸ ಹಿರೇಮಳಲಿ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು