ಕಲಬುರ್ಗಿ | ಪರಿಸರ ಕಾಳಜಿ
ಬಾಯಾರಿದವರಿಗೆ ನೀರು ಒದಗಿಸುವ ಮತ್ತು ಗಿಡನೆಟ್ಟು ಪರಿಸರ ಸಂರಕ್ಷಿಸುವ ಕಾಯಕದಲ್ಲಿ ನಿರತರಾಗಿದ್ದಾರೆ ರೇವಣಸಿದ್ದ ಬಡಾ. ಸದಾ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗುವ ಇವರು ಕಲಬುರ್ಗಿಯ ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ತಾಂತ್ರಿಕ ತರಬೇತುದಾರ.
ಇವರು ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮದವರು. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಾಡಿದಾಗ ಮತ್ತು ಬೋರ್‌ವೆಲ್‌ಗಳು ಬತ್ತಿದಾಗ ರಟಕಲ್ ಗ್ರಾಮಸ್ಥರಿಗೆ ಸ್ವತಃ ಟ್ಯಾಂಕರ್ ಮೂಲಕ ನೀರು ಪೂರೈಸಿದರು. ರಟಕಲ್‌ನ ಸುತ್ತಮುತ್ತಲ ಪ್ರದೇಶ ಮತ್ತು ರಸ್ತೆ ಬದಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಅಲ್ಲಲ್ಲಿ ನೀರಿನ ಗುಮ್ಮಿಗಳನ್ನು ನಿರ್ಮಿಸಿದ್ದಾರೆ.
ತಮ್ಮ ಊರು ಸುತ್ತಲಿನ ಪ್ರದೇಶದ ಹಸರೀಕರಣಕ್ಕೆ ಒತ್ತು ನೀಡಿರುವ ಅವರು ಈ ವರೆಗೆ 2 ಸಾವಿರ ಸಸಿಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಆರೋಗ್ಯ ರಕ್ಷಣೆಗೆ ಒತ್ತು ನೀಡಿ ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳುವಂತೆ ಗ್ರಾಮಸ್ಥರನ್ನು ಪ್ರೇರೇಪಿಸಿದ್ದಾರೆ. ಇವರ ಪ್ರೇರಣೆಯಿಂದ ರಟಕಲ್ ಬಡಾ ತಾಂಡಾದಲ್ಲಿ 40 ಕುಟುಂಬದವರು ಶೌಚಾಲಯ ನಿರ್ಮಿಸಿಕೊಂಡಿದ್ದಾರೆ.
‘ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದು, ಪರಿಸರ ಹದಗೆಡುತ್ತಿದೆ. ಮರ ಬೆಳೆಸಿ ಹಸಿರು ಪರಿಸರ ಕಾಯ್ದುಕೊಂಡಲ್ಲಿ ಪರಿಸ್ಥಿತಿ ಸುಧಾರಿಸುತ್ತದೆ. ಹೀಗಾಗಿ ನಾನೇ ಸ್ವತಃ ಸಸಿಗಳನ್ನು ನೆಡುವುದರ ಜೊತೆಗೆ ಇತರರಿಗೂ ಈ ಕಾರ್ಯದಲ್ಲಿ ಕೈಜೋಡಿಸಲು ಕೋರಿದ್ದೇನೆ. ನೀರಿನ ಸಮಸ್ಯೆ ನೀಗಿಸುವುದು ನನ್ನ ಮುಖ್ಯ ಗುರಿಗಳಲ್ಲಿ ಒಂದು’ ಎಂದು ರೇವಣಸಿದ್ದ ಬಡಾ ಅವರು.
-ಸಂತೋಷ ಈ. ಚಿನಗುಡಿ