ಚಿತ್ರದುರ್ಗ | ಸಮಾಜಸೇವೆ
ಬಿ.ಇಡಿ ಪದವಿ ಮುಗಿಸಿ ಈಗಷ್ಟೇ ಉದ್ಯೋಗಕ್ಕೆ ಸಜ್ಜಾಗಿರುವ ಡಿ.ರಂಗಸ್ವಾಮಿ ಅವರ ಹೆಸರಿನೊಂದಿಗೆ ‘ಸಂಜೀವಿನಿ’ ಸೇರಿಕೊಂಡಿದೆ. ಅಪಘಾತದಲ್ಲಿ ಗಾಯಗೊಂಡು ಸಾವು–ಬದುಕಿನ ನಡುವೆ ಹೋರಾಡುವ ಜೀವಗಳಿಗೆ ರಂಗಸ್ವಾಮಿ ನಿಜಕ್ಕೂ ಸಂಜೀವಿನಿಯೇ. ಚಿತ್ರ ನಟ ಯಶ್ ಸೇರಿ ಅನೇಕರು ಈ ಯುವಕನ ಸೇವೆಯನ್ನು ಶ್ಲಾಘಿಸಿದ್ದಾರೆ.
ಚಿತ್ರದುರ್ಗ ತಾಲ್ಲೂಕಿನ ಇಂಗಳದಾಳ್ ಎಂಬ ಹಳ್ಳಿ ರಂಗಸ್ವಾಮಿಯ ಸ್ವಗ್ರಾಮ. ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪವಿರುವ ಹಳ್ಳಿಯಲ್ಲೇ ವಾಸ. ಹೆದ್ದಾರಿಯಲ್ಲಿ ಸಂಭವಿಸುವ ಅಪಘಾತಗಳು ‘ಸಂಜೀವಿನಿ’ ತಂಡದ ಅಸ್ತಿತ್ವಕ್ಕೆ ಕಾರಣವಾಗಿವೆ. ಅಪಘಾತ ತಡೆಯುವ ಹಾಗೂ ಗಾಯಾಳುಗಳಿಗೆ ನೆರವಾಗುವ ಧ್ಯೇಯೋದ್ದೇಶವನ್ನು ತಂಡ ಹೊಂದಿದೆ. ಸಾವಿರಾರು ಯುವಕರು ರಂಗಸ್ವಾಮಿ ಜೊತೆ ಕೈಜೋಡಿಸಿದ್ದಾರೆ.
‘ಅಪಘಾತದಲ್ಲಿ ಗಾಯಗೊಂಡು ನರಳಾಡುವವರನ್ನು ಕಂಡು ಮನಸು ಗಾಸಿಗೊಂಡಿತ್ತು. ಗಾಯಾಳುಗಳಿಗೆ ನೆರವಾಗುವ ಬದಲು ಬೆಳ್ಳುಳ್ಳಿ, ಈರುಳ್ಳಿ ಸೇರಿ ಧಾನ್ಯಗಳನ್ನು ದೋಚಲು ಜನರು ಮುಂದಾಗುತ್ತಿದ್ದರು. ಜನರಲ್ಲಿ ಜಾಗೃತಿ ಮೂಡಿಸಲು ಮುಂದಾದೆ. ಸ್ನೇಹಿತ ಹರ್ಷ ಅಪಘಾತದಲ್ಲಿ ಮೃತಪಟ್ಟ ಬಳಿಕ ಈ ಸೇವೆಯನ್ನು ಇನ್ನಷ್ಟು ವಿಸ್ತರಿಸಿದೆ’ ಎನ್ನುತ್ತಾರೆ ರಂಗಸ್ವಾಮಿ.
ಅಪಘಾತ ವಲಯಗಳನ್ನು ಗುರುತಿಸಿ ವಾಹನ ಸವಾರರಿಗೆ ಎಚ್ಚರಿಕೆ ನೀಡುವುದು ‘ಸಂಜೀವಿನಿ’ ತಂಡದ ಕಾರ್ಯ. ರಸ್ತೆ ಸುರಕ್ಷತೆಯ ಬಗ್ಗೆ ಯುವ ಸಮೂಹದಲ್ಲಿ ಅರಿವನ್ನೂ ಮೂಡಿಸುತ್ತಿದೆ. ಅಪಘಾತ ಸಂಭವಿಸಿದ ಸ್ಥಳಕ್ಕೆ ಆಂಬುಲೆನ್ಸ್‌ನಷ್ಟೇ ವೇಗವಾಗಿ ತಲುಪಿ ಪ್ರಥಮ ಚಿಕಿತ್ಸೆ ನೀಡುವ ಕೆಲಸ ಮಾಡುತ್ತಿದೆ.
- ಜಿ.ಬಿ.ನಾಗರಾಜ್