ರಮ್ಯಾ ನಿತ್ಯಾನಂದ ಶೆಟ್ಟಿ

ಮಂಗಳೂರು | ಪಕ್ಷಿ ಸಂರಕ್ಷಣೆ

'ಗುಬ್ಬಚ್ಚಿ ಗೂಡು' ಕಾರ್ಯಕ್ರಮದ ಮೂಲಕ ಪಕ್ಷಿ ಸಂಕುಲಗಳ ಸಂರಕ್ಷಣೆ

 

'ಗುಬ್ಬಚ್ಚಿ ಗೂಡು' ಎಂಬ ವಿನೂತನ ಕಾರ್ಯಕ್ರಮದ ಮೂಲಕ ಪಕ್ಷಿ ಸಂಕುಲಗಳ ಸಂರಕ್ಷಣೆಗೆ ಪಣತೊಟ್ಟವರು ಬಂಟ್ವಾಳ ತಾಲ್ಲೂಕಿನ ಮುಡಾಯಿಬೆಟ್ಟು ನಿವಾಸಿ ರಮ್ಯಾ ನಿತ್ಯಾನಂದ ಶೆಟ್ಟಿ. ಐದು ವರ್ಷಗಳಿಂದ ನೂರಾರು ಜಾಗೃತಿ ಅಭಿಯಾನ, ಜೀವ ವೈವಿಧ್ಯಗಳ ಛಾಯಾಗ್ರಹಣ, ದಾಖಲೀಕರಣ ಮತ್ತು ಪಕ್ಷಿಪಾಠಗಳ ಮೂಲಕ ಪಕ್ಷಿಗಳ ಉಳಿವಿಗೆ ಅವರು ಸದ್ದಿಲ್ಲದೆ ಸೇವೆ ಮಾಡುತ್ತಿದ್ದಾರೆ.

 

ಅಳಿವಿನಂಚಿನಲ್ಲಿರುವ ಪಕ್ಷಿಸಂತತಿಯ ಬಗ್ಗೆ ಸದಾ ಚಿಂತಿಸುವ ರಮ್ಯಾ ತಮ್ಮ ಮನೆಯ 2 ಎಕರೆ ಜಾಗದಲ್ಲಿ 'ಗುಬ್ಬಚ್ಚಿಗೂಡು' ಎಂಬ ಹೆಸರಿನಲ್ಲಿ ಪಕ್ಷಿಗಳಿಗೆ ಆವಾಸಸ್ಥಾನ ಮಾಡಿದ್ದಾರೆ. ಪ್ರತಿದಿನ ಹತ್ತಾರು ಜಾತಿಯ ನೂರಾರು ಪಕ್ಷಿಗಳು ಗುಬ್ಬಚ್ಚಿಗೂಡಿಗೆ ಭೇಟಿ ನೀಡುತ್ತವೆ. ಬೇಸಿಗೆ ಕಾಲದಲ್ಲಿ ಆಹಾರ ಕೊರತೆಯಿಂದ ವಲಸೆ ಹೋಗುವ ಪಕ್ಷಿಗಳಿಗೆ ಇವರು ಆಪತ್ಭಾಂದವರಾಗಿದ್ದಾರೆ.

 

'ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ' ಎಂಬ ಸಂದೇಶದೊಂದಿಗೆ ರಾಜ್ಯದ 168 ಶಾಲೆಗಳಿಗೆ ಭೇಟಿ ನೀಡಿ ಉಚಿತವಾಗಿ ಪಕ್ಷಿಗಳ ಕುರಿತು ಜಾಗೃತಿ ಮೂಡಿಸಿದ್ದಾರೆ. ಅಲ್ಲದೆ, ಪಕ್ಷಿಗಳಿಗೆ ನೀರು, ಆಹಾರ ಇಡಲು ಮಣ್ಣಿನ ಪಾತ್ರೆ ನೀಡಿದ್ದಾರೆ.

 

‘ಮನೆ-ಮನಗಳಲ್ಲಿ ಗುಬ್ಬಚ್ಚಿಗೂಡು' ಅಭಿಯಾನದಲ್ಲಿ 600 ಮನೆಗಳಿಗೆ ಮಣ್ಣಿನ ಪಾತ್ರೆಗಳನ್ನು ಉಚಿತವಾಗಿ ನೀಡಿದ್ದಾರೆ. ಪ್ರತಿ ಭಾನುವಾರ ಒಂದೊಂದು ಹಳ್ಳಿಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಜಮ್ಮು ಕಾಶ್ಮೀರ, ಪಂಜಾಬ್‌, ಉತ್ತರಖಂಡ, ದೆಹಲಿ ಮುಂತಾದ ರಾಜ್ಯಗಳಲ್ಲಿ ಸಂಚರಿಸಿ ಪಕ್ಷಿ ಉಳಿವಿನ ಬಗ್ಗೆ ಸಾರ್ವಜನಿಕರಿಗೆ ಅರಿವು ನೀಡಿದ್ದಾರೆ. ಎಂ.ಕಾಂ. ಪದವೀಧರೆಯಾಗಿರುವ ರಮ್ಯಾ, ಪ್ರಸ್ತುತ ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಪ್ರಥಮ ವರ್ಷ ಬಿ.ಇಡಿ ವ್ಯಾಸಂಗ ಮಾಡುತ್ತಿದ್ದಾರೆ.

- ಪ್ರದೀಶ್ ಎಚ್.

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು