ರಾಜು

ಮಂಡ್ಯ | ಕರಕುಶಲ

ಕಾಲಿಲ್ಲದವನಿಗೆ ಕೈಹಿಡಿದ ಕುಶಲಕಲೆ

 

ಮಂಡ್ಯ ನಗರದ ವುಡ್‌ ವರ್ಕ್ಸ್‌ ಅಂಗಡಿಯಲ್ಲಿ ಮರಗೆಲಸ ಮಾಡುವ ರಾಜುಗೆ ಎರಡೂ ಕಾಲಿಲ್ಲ, ಕಿವಿ ಕೇಳುವುದಿಲ್ಲ. ಕಣ್ಣಿನಿಂದಲೇ ಸಂವಹನ ನಡೆಸುವ ಅವರು ತಮ್ಮ ಕೌಶಲ ಕಲೆಯಿಂದಲೇ ಕುಟುಂಬದ ನೊಗ ಹೊತ್ತಿದ್ದಾರೆ.

 

ಎರಡೂವರೆ ವರ್ಷದ ಮಗುವಾಗಿದ್ದ ರಾಜು ಕಾಲುಗಳ ಮೇಲೆ ‘ಶಂಭುಲಿಂಗೇಶ್ವರ ಬಸ್‌’ ಹರಿಯಿತು. ಎರಡೂ ಕಾಲೂ ತುಂಡಾದವು. ನರಮಂಡಲದ ವ್ಯತ್ಯಾಸದಿಂದಾಗಿ ಮಗುವಿನ ಮಾತು ಹೋಯಿತು, ಕಿವಿಗಳು ಕೇಳದಾದವು. ದೇಹದ ಆರು ಕಡೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರು ಮಗುವಿನ ಪ್ರಾಣ ಉಳಿಸಿದ್ದರು.

 

ಮಂಡ್ಯದ ಗಾಂಧಿನಗರದ 8ನೇ ಅಡ್ಡರಸ್ತೆಯಲ್ಲಿ ತಾಯಿ ರಾಜಮ್ಮ ಅವರ ಜೊತೆ ರಾಜು ವಾಸಿಸುತ್ತಿದ್ದಾರೆ. ತಂದೆ ತೀರಿಕೊಂಡಿದ್ದಾರೆ. 28 ವರ್ಷದ ರಾಜು ಎಲ್ಲರ ಪ್ರೀತಿಯ ಯುವಕ. ಎರಡೂವರೆ ವರ್ಷದ ಮಗುವಾಗಿದ್ದಾಗ ಕಾಲು ಕಳೆದುಕೊಂಡು, ಈಗ ಎರಡೂವರೆ ಅಡಿ ಇದ್ದಾರೆ. ಮಂಡಿಯಲ್ಲೇ ಪ್ರತಿನಿತ್ಯ ಏಳೆಂಟು ಕಿ.ಮೀ ನಡೆಯುತ್ತಾರೆ. ತಾವು ತೊಡುವ ಚಪ್ಪಲಿಗಳನ್ನು ತಾವೇ ವಿನ್ಯಾಸ ಮಾಡಿಕೊಂಡಿದ್ದಾರೆ. ನಗುಮೊಗದಲ್ಲಿ ನೋವಿಲ್ಲ, ಕನಸುಗಳಿವೆ. ಕಣ್ಣು ಹಾಗೂ ಕೈಗಳು ರಾಜುವಿನ ಆಯುಧಗಳು.

 

ರಾಜು, ನೋಡಿದ್ದನ್ನು ಕಣ್ಣಿಗೆ ಕಟ್ಟಿದಂತೆ ಕಲೆಗಿಳಿಸುತ್ತಾರೆ. ಮರದಲ್ಲಿ ಅತೀ ಸಣ್ಣ ಶಿವಲಿಂಗ ಕೆತ್ತುವ ಕಲೆಯಲ್ಲಿ ಹೆಸರುವಾಸಿ. ಮರದಿಂದ ನಂದಿ, ಗಣಪತಿ, ಲಕ್ಷ್ಮಿ, ಗಂಡಭೇರುಂಡ, ಹನುಮಂತ ಮುಂತಾದ ವಿಗ್ರಹ ತಯಾರಿಸುವ ಮೂಲಕ ಉತ್ತಮ ಕುಶಲಕರ್ಮಿಯಾಗಿ ಹೊಮ್ಮಿದ್ದಾರೆ.

 

ಸೂಕ್ಷ್ಮಾತಿ ಸೂಕ್ಷ್ಮ ಕಲಾಕುಸುರಿ ಮನಸೂರೆಗೊಳ್ಳುತ್ತದೆ. ಲಕ್ಷ್ಮಿ, ಆನೆ ಚಿತ್ರವುಳ್ಳ ಬಾಗಿಲು ರೂಪಿಸುತ್ತಾರೆ. ಗಣಪತಿ ಉತ್ಸವದ ಅಂಗವಾಗಿ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ.

 

- ಎಂ.ಎನ್‌.ಯೋಗೇಶ್‌‌

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು