ರಾಜು ಭಾಟಿ

ಬಾಗಲಕೋಟೆ | ಸೈಕ್ಲಿಸ್ಟ್

ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತ ತಂಡ ಪ್ರತಿನಿಧಿಸಿದ ಕನ್ನಡಿಗ

 

ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಟಕ್ಕಳಕಿ ಗ್ರಾಮದ ಪ್ರತಿಭಾನ್ವಿತ ಸೈಕ್ಲಿಸ್ಟ್‌ ರಾಜು ಭಾಟಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಅನೇಕ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ಗಳಲ್ಲಿ ಪದಕಗಳನ್ನು ಜಯಿಸಿದ್ದಾರೆ.

2019ರಲ್ಲಿ ಇಂಡೊನೇಷ್ಯಾದ ಜಕಾರ್ತದಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಕನ್ನಡಿಗರೆಲ್ಲರೂ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ. ಈ ಕ್ರೀಡಾಕೂಟಕ್ಕೆ 36 ವರ್ಷಗಳಿಂದ ರಾಜ್ಯದ ಯಾವ ಸೈಕ್ಲಿಸ್ಟ್‌ ಕೂಡ ಅರ್ಹತೆ ಗಳಿಸಿರಲಿಲ್ಲ. 1982ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಏಷ್ಯನ್‌ ಕ್ರೀಡಾಕೂಟದಲ್ಲಿ ಚಂದ್ರಪ್ಪ ಮಲ್ಲಪ್ಪ ಕುರಣಿ ಅವರ ಬಳಿಕ ಯಾರೂ ಈ ಸಾಧನೆ ಮಾಡಿರಲಿಲ್ಲ.  

 

ಸದ್ಯಕ್ಕೆ ಹುಬ್ಬಳ್ಳಿಯಲ್ಲಿ ರೈಲ್ವೆ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ರಾಜು, ದೆಹಲಿಯಲ್ಲಿ 2017ರಲ್ಲಿ ನಡೆದಿದ್ದ ಏಷ್ಯಾ ಕಪ್‌ ಸೈಕ್ಲಿಂಗ್‌ ಟೂರ್ನಿಯ ವೈಯಕ್ತಿಕ ಪರ್ಸ್ಯೂಟ್‌ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದರು. ತಂಡ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.

 

ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನ ಜೂನಿಯರ್‌ ವಿಭಾಗದಲ್ಲಿ ನಾಲ್ಕು ಚಿನ್ನ, ಎರಡು ಬೆಳ್ಳಿ ಹಾಗೂ ಮೂರು ಕಂಚು ಜಯಿಸಿದ್ದಾರೆ. ಸೀನಿಯರ್‌ ವಿಭಾಗದಲ್ಲಿ ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಈಗಲೂ ನಿತ್ಯ ಎಂಟರಿಂದ ಒಂಬತ್ತು ಗಂಟೆ ಸೈಕ್ಲಿಂಗ್ ಅಭ್ಯಾಸ ಮಾಡುತ್ತಾರೆ.

 

- ಪ್ರಮೋದ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು