ರಾಜೇಶ್ವರಿ ಸಾರಂಗಮಠ

ಹಾನಗಲ್‌ | ಶಿಕ್ಷಕಿ

ಜೈಲುಹಕ್ಕಿಗಳ ಪಾಲಿನ ಅಕ್ಷರದ ಅಕ್ಕ

 

ಕಪ್ಪು ಹಲಗೆ ಮೇಲೆ ಬಿಳಿಯ ಅಕ್ಷರ ಬರೆದು ಪಾಠ ಹೇಳುವ ಶಿಕ್ಷಕರನ್ನು ನೋಡಿದ್ದೇವೆ. ಸನ್ಮಾನಗಳ ಜತೆಗೆ ಶ್ರಮದ ಫಲವಾಗಿ ಸಂಬಳ ಪಡೆಯುವ ಬಡ ಗುರುಗಳನ್ನೂ ಕಂಡಿದ್ದೇವೆ. ಆದರೆ, ಏನನ್ನೂ ನಿರೀಕ್ಷಿಸದೇ ಜೈಲಿನಲ್ಲಿ ಕೈದಿಗಳಿಗೆ ಅಕ್ಷರಾಭ್ಯಾಸ ಮಾಡಿಸುವ ರಾಜೇಶ್ವರಿ ರವಿ ಸಾರಂಗಮಠ, ಬಂಧಿಗಳ ಪಾಲಿನ ‘ಅಕ್ಷರ ಅಕ್ಕ’ ಎನಿಸಿಕೊಂಡಿದ್ದಾರೆ.

 

ಮೂಲತಃ ಅಕ್ಕಿಆಲೂರ ಗ್ರಾಮದವರಾಗಿರುವ ರಾಜೇಶ್ವರಿ, ಓದಿದ್ದು ಕೇವಲ ಪಿಯುಸಿ. ಬಾಲ್ಯದಿಂದಲೂ ನಾಟಕ, ಹಾಡು, ಏಕಪಾತ್ರಾಭಿನಯ ಹಾಗೂ ಸಮಾಜ ಸೇವೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ. ತಂದೆ ಚಂದ್ರಶೇಖರಯ್ಯ, ತಾಯಿ ಶಕುಂತಲಾ, ಪತಿ ರವಿ ಅವರು ಸದ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

 

‘ಕನ್ನಡ ನಾಡು ಸಾಕ್ಷರರ ನಾಡು’ ಆಂದೋಲನದ ಮೂಲಕ 1998ರಿಂದ ಅಕ್ಷರ ಕಲಿಸುವ ಪಯಣ ಆರಂಭಿಸಿದ ರಾಜೇಶ್ವರಿ, ಆರು ತಿಂಗಳ ಕಾಲ ಜಿಲ್ಲಾ ಕಾರಾಗೃಹದ ಬಂದಿಗಳಿಗೆ ಅಕ್ಷರ ಕಲಿಸುವ ಕಾಯಕ ಮಾಡಿದ್ದಾರೆ. 

 

ಕಳೆದ ಆಗಸ್ಟ್‌ನಲ್ಲಿ ಜಿಲ್ಲಾ ಕಾರಾಗೃಹದ ಅನಕ್ಷರಸ್ಥ ಕೈದಿಗಳಿಗೆ, ಮೂಲ ಸಾಕ್ಷರತಾ ಪರೀಕ್ಷೆಯನ್ನು ನಡೆಸಿದರು. ಅಲ್ಲದೆ, ನೊಂದ ಮಹಿಳೆಯರಿಗೆ ವೃತ್ತಿ ಕೌಶಲ, ಹೊಲಿಗೆ ತರಬೇತಿಯನ್ನು ಚೇತನಾ ಮಲ್ಲಪ್ಪ ಶಿಲೇದ ಅವರಿಂದ ಕೊಡಿಸಿದ್ದಾರೆ. ಲೇಖಕಿ ಆಗಿರುವ ಇವರು ‘ಹೆಣ್ಣು ಪ್ರಣತಿ’ ಹಾಗೂ ‘ಹೆಣ್ಣು ಹೃದಯ’ ಎಂಬ ಕೃತಿಗಳನ್ನೂ ರಚಿಸಿದ್ದಾರೆ. 

-ಮಂಜುನಾಥ ಸಿ. ರಾಠೋಡ
 

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು