ರಾಘವೇಂದ್ರ ದೇವಗಿ

ಬೆಂಗಳೂರು | ಥ್ರೋಡೌನ್ ಪರಿಣಿತ

ಕ್ರಿಕೆಟ್ ಅಂಗಳದ ಥ್ರೋಡೌನ್ ತಾರೆ

 

 

ಭಾರತ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್‌ಗಳು ರನ್‌ಗಳ ರಾಶಿ ಪೇರಿಸಿದ್ದನ್ನು ನೋಡಿ ಆನಂದಿಸಿದವರಿಗೆ ಲೆಕ್ಕವಿಲ್ಲ.  ಆದರೆ ಈ ಸಾಧಕರ ಹಿಂದೆ ಹತ್ತಾರು ಮಂದಿಯ ಶ್ರಮವೂ ಇರುತ್ತದೆ.

 

ಹೌದು; ಅಂತಹ ಒಬ್ಬ ತೆರೆಮರೆಯ ಸಾಧಕ ರಾಘವೇಂದ್ರ ದೇವಗಿ. ಸಚಿನ್‌ ತೆಂಡೂಲ್ಕರ್‌ ಅವರಿಂದ ಹಿಡಿದು ಇಂದಿನ ವಿರಾಟ್ ಕೊಹ್ಲಿಯವರೆಗೆ ಥ್ರೋಡೌನ್ ಪರಿಣತರಾಗಿ ಕಾರ್ಯನಿರ್ವಹಿಸುತ್ತಿರುವ ಹೆಗ್ಗಳಿಕೆ ಇವರದ್ದು. 

 

ಕುಮಟಾದ ಕೆಳಮಧ್ಯಮವರ್ಗದಲ್ಲಿ ಜನಿಸಿದವರು ರಘು. ಆದರೆ ಕ್ರಿಕೆಟ್‌ ಪ್ರೀತಿ ಅವರನ್ನು ಹುಬ್ಬಳ್ಳಿಗೆ ಕರೆದೊಯ್ದಿತು. ಅಲ್ಲಿ ಬಿಡಿಕೆ ಕ್ರೀಡಾ ಪ್ರತಿಷ್ಠಾನದ ತಂಡ ಸೇರಿದರು. ಬಿ.ವಿ.ಬಿ ಕಾಲೇಜು ಮೈದಾನವೇ ಅವರ ವಾಸಸ್ಥಾನವೂ ಆಯಿತು. ಕ್ರೀಡಾಂಗಣದ ಸಿಬ್ಬಂದಿಯ ಪುಟ್ಟ ಕೋಣೆಯಲ್ಲಿಯೇ ಆಶ್ರಯ ಪಡೆದರು. ಕೆಲವು ಬಾರಿ ಪಕ್ಕದ ಸ್ಮಶಾನದಲ್ಲಿಯೂ ರಘು ಮಲಗಿದ್ದನ್ನು ಬಿಡಿಕೆ ಪ್ರತಿಷ್ಠಾನದ ಕೋಚ್‌ಗಳು ನೆನಪಿಸಿಕೊಳ್ಳುತ್ತಾರೆ. ಈ ಕಡುಕಷ್ಟದ ಹಾದಿಯಲ್ಲಿ ಜೂನಿಯರ್ ಕ್ರಿಕೆಟಿಗನಾಗಿ ರೂಪುಗೊಳ್ಳುತ್ತಿದ್ದ ರಘು ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡರು. ಆಟದಿಂದಲೇ ದೂರವುಳಿಯಬೇಕಾಯಿತು. ಆದರೂ ಕೋಚ್ ಆಗಿ ಕಾರ್ಯನಿರ್ವಹಿಸುವ ಮೂಲಕ ಕ್ರಿಕೆಟ್‌ ನಂಟು ಉಳಿಸಿಕೊಂಡರು.

 

ಬೆಂಗಳೂರಿಗೆ ಬಂದು ಕೆಲ ಅಕಾಡೆಮಿಗಳಲ್ಲಿ ಕಾರ್ಯನಿರ್ವಹಿಸಿದರು. 2010–11ರಲ್ಲಿ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯ ಸಿಬ್ಬಂದಿಯಾಗಿ ಆಯ್ಕೆಯಾದರು. ಅಲ್ಲಿ 2012ರಲ್ಲಿ ದಿಗ್ಗಜ ಸಚಿನ್ ತೆಂಡೂಲ್ಕರ್ ಮನಸ್ಸು ಗೆದ್ದ ರಘು ಇಂದಿಗೂ ಹಿಂದಿರುಗಿ ನೋಡಿಲ್ಲ. ಅಂದಿನಿಂದ ಇಂದಿನವರೆಗೂ ಭಾರತ ಕ್ರಿಕೆಟ್‌ ತಂಡದ ಅಚ್ಚುಮೆಚ್ಚಿನ ‘ರಘು’ ಆಗಿದ್ದಾರೆ.  ರಾಹುಲ್ ದ್ರಾವಿಡ್, ಮಹೇಂದ್ರಸಿಂಗ್ ಧೋನಿ, ಚೇತೇಶ್ವರ್ ಪೂಜಾರ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲರಿಗೂ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸಕ್ಕೆ ರಘು ಇರಲೇಬೇಕು. ಅಡುಗೆ ಸೌಟು ಹೋಲುವ ಥ್ರೋಡೌನ್ ಸಲಕರಣೆ ಮೂಲಕ ಚೆಂಡಿನ ವೇಗ, ತಿರುವುಗಳನ್ನು ನಿಯಂತ್ರಿಸಿ ಎಸೆಯುವ 33ರ ಹರೆಯದ ರಘು, ಥ್ರೋಡೌನ್ ಕಾಯಕಕ್ಕೆ ತಾರಾವರ್ಚಸ್ಸು ತಂದಿದ್ದಾರೆ.

 

- ಗಿರೀಶ ದೊಡ್ಡಮನಿ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು