ಪುಣ್ಯಾ ನಂಜಪ್ಪ

ಕೊಡಗು | ಟ್ರೈನಿ ಮಹಿಳಾ ಪೈಲಟ್

ಬಾಲ್ಯದ ಕನಸಿಗೆ ರೆಕ್ಕೆ ಬಂತು

 

ಭಾರತೀಯ ವಾಯುಪಡೆಯ ಟ್ರೈನಿ ಮಹಿಳಾ ಪೈಲಟ್ ಆಗಿ ರಾಜ್ಯದಿಂದ ಆಯ್ಕೆಯಾದ ಏಕೈಕ ಯುವತಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಪುಣ್ಯಾ ನಂಜಪ್ಪ. ಮೈಸೂರಿನಲ್ಲಿ ಹುಟ್ಟಿ ಬೆಳೆದ ಕೊಡಗಿನ ಬೆಡಗಿ ಪುಣ್ಯಾಗೆ ಸಾಹಸಮಯ ಕ್ರೀಡೆಗಳೆಂದರೆ ಅಚ್ಚುಮೆಚ್ಚು.

 

ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿ (ಎನ್‌ಡಿಎ) ಸೇರಬೇಕೆಂಬ ಅವರ ಆಸೆಗೆ ಅವಕಾಶ ಸಿಗಲಿಲ್ಲ. ಆದರೂ ಅವರು ಛಲಬಿಡಲಿಲ್ಲ. 2018ರ ಆಗಸ್ಟ್‌ನಲ್ಲಿ ಎಎಫ್‌ಸಿಎಟಿ (ಏರ್‌ಫೋರ್ಸ್‌ ಕಮಿಷನ್ ಅಡ್ಮಿಷನ್‌ ಟೆಸ್ಟ್‌) ತೆಗೆದುಕೊಂಡ ಪುಣ್ಯಾ, ಪ್ರವೇಶ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ. ನಂತರ 5 ದಿನ ಸಂದರ್ಶನ, ವೈದ್ಯಕೀಯ ಪರೀಕ್ಷೆಯಲ್ಲೂ ಪಾಸಾಗಿದ್ದು, ಟ್ರೈನಿ ಪೈಲಟ್‌ ಆಗಿ ಆಯ್ಕೆಯಾಗಿದ್ದಾರೆ. ಈಗ ಹೈದರಾಬಾದ್‌ನ ದುಂಡಿಗಲ್‌ ವಾಯು ಸೇನಾ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಒಂದೂವರೆ ವರ್ಷದ ತರಬೇತಿ ನಂತರ, ಭಾರತೀಯ ವಾಯುಪಡೆಗೆ ಪೈಲಟ್‌ ಆಗಲಿದ್ದಾರೆ.

 

ಪುಣ್ಯಾ ಅವರ ತಂದೆ ದಿವಂಗತ ಸಿ.ಪಿ.ನಂಜಪ್ಪ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕು ಚೆಂಬೆ ಬೆಳ್ಳೂರಿನವರು. ತಾಯಿ ಅನುರಾಧಾ ಸೇಂಟ್‌ ಜೋಸೆಫ್‌ ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕಿಯಾಗಿದ್ದಾರೆ.

 

‘9ನೇ ತರಗತಿ ಓದುತ್ತಿದ್ದಾಗ ಯುವ ದಸರಾದಲ್ಲಿ ಏರ್ ಶೋ ನೋಡಿದಾಗ ಮೈಯಲ್ಲಿ ರೋಮಾಂಚನವಾಯಿತು. ನಾನು ಇವರಂತೆ ಆಗಬೇಕು ಎಂಬ ಆಸೆಪಟ್ಟೆ. ಕನಸು ನನಸಾಗಿಸಿಕೊಳ್ಳಲು ಎನ್‌ಸಿಸಿ ಸೇರಿದೆ. ಆಗ ಅಲ್ಲಿ ಚಿಕ್ಕ ವಿಮಾನ ಚಾಲನೆಯ ಅವಕಾಶ ಸಿಕ್ಕಿತು. ಮುಂದೆ ಸಾಹಸಮಯವಾದ ಸ್ಕೂಬಾ ಡೈವಿಂಗ್‌ ತರಬೇತಿಯನ್ನು ಅಂಡಮಾನ್‌ನಲ್ಲಿ ಪಡೆದಿದ್ದೇನೆ. 2018ರಲ್ಲಿ ದುಬೈನಲ್ಲಿ ಸ್ಕೂಬಾ ಡೈವಿಂಗ್‌ ಮಾಡಿದ್ದು, ಒಂಥರಾ ಥ್ರಿಲ್ ಮತ್ತು ಖುಷಿ ನೀಡಿತ್ತು. ಸಮುದ್ರದಲ್ಲಿ 30 ಮೀಟರ್ ಆಳಕ್ಕೆ ಆಮ್ಲಜನಕದ ಸಿಲಿಂಡರ್‌ ಕಟ್ಟಿಕೊಂಡು ಇಳಿದಿದ್ದೇನೆ’ ಎನ್ನುತ್ತಾರೆ ಪುಣ್ಯಾ.

 

- ಪ್ರದೀಪ್‌ ಕುಂದಣಗಾರ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು