ಪ್ರೇಮಾ ಹುಚ್ಚಣ್ಣವರ

ಗದಗ | ಅಂತರರಾಷ್ಟ್ರೀಯ ಕುಸ್ತಿಪಟು

ಕರ್ನಾಟಕ ಗೋಲ್ಡನ್ ರಸ್ಲರ್ ಪ್ರೇಮಾ

 


ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಬಂಗಾರ, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಅಂತರರಾಷ್ಟ್ರೀಯ ಕುಸ್ತಿಪಟು ಪ್ರೇಮಾ ಹುಚ್ಚಣ್ಣವರ (23) ಗದಗ ತಾಲ್ಲೂಕಿನ ಅಸುಂಡಿ ಗ್ರಾಮದವರು.

 

ಬಾಲ್ಯದಲ್ಲಿಯೇ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಪ್ರೇಮಾ ಹಾಕಿಯಲ್ಲಿ ಸಾಧನೆ ಮಾಡಬೇಕು ಎಂಬ ಗುರಿ ಹೊಂದಿದ್ದರು. ಆದರೆ, ‘ಎತ್ತರ’ ಕಡಿಮೆ ಎಂಬ ಕಾರಣಕ್ಕೆ ಹಾಕಿಯಲ್ಲಿ ಅವಕಾಶ ಸಿಗಲಿಲ್ಲ. ಇದೇ ಅವರಿಗೆ ಕುಸ್ತಿಯಲ್ಲಿ ಸಾಧನೆ ಮಾಡಲು ರಹದಾರಿಯಾಯಿತು. ಕುಸ್ತಿ ತರಬೇತುದಾರ ಶರಣಗೌಡ ಬೇಲೇರಿ ಅವರು ಪ್ರೇಮಾ ಅವರನ್ನು ಗುರುತಿಸಿ, ಕುಸ್ತಿ ತರಬೇತಿ ನೀಡಿದರು.

 

‘ಹುಡುಗರಂತೆ ತಲೆಕೂದಲು ಕತ್ತರಿಸಿಕೊಂಡು, ಕುಸ್ತಿ ಆಡಲು ಹೊರಟಿದ್ದಾಳೆ ಎಂದು ಗೇಲಿ ಮಾಡಿದ್ದ ಗ್ರಾಮಸ್ಥರೇ ಮೆಚ್ಚುವಂತೆ ಕುಸ್ತಿಯಲ್ಲಿ ಸಾಧನೆ ಮಾಡಿದೆ. 2008ರಿಂದ 2019ರವರೆಗೆ ರಾಷ್ಟ್ರಮಟ್ಟದ ಕುಸ್ತಿಯಲ್ಲಿ 15 ಮತ್ತು ರಾಜ್ಯಮಟ್ಟದ ಕುಸ್ತಿಯಲ್ಲಿ 25 ಬಂಗಾರದ ಪದಕ ಜಯಿಸಿದ್ದೇನೆ’ ಎಂದು ಪ್ರೇಮಾ ನೆನಪಿಸಿಕೊಂಡರು.

 

ಸದ್ಯ ಗದಗ ಕ್ರೀಡಾ ವಸತಿ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕರ್ನಾಟಕ ಗೋಲ್ಡನ್ ರಸ್ಲರ್ ಖ್ಯಾತಿಯ ಪ್ರೇಮಾ 2014ರಲ್ಲಿ ರಾಜ್ಯ ಸರ್ಕಾರದಿಂದ ಏಕಲವ್ಯ ಪ್ರಶಸ್ತಿ, 2016ರಲ್ಲಿ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ, 2013ರಲ್ಲಿ ಕೆಒಎ, ಎಸ್‌ಡಬ್ಲ್ಯೂಎಬಿ ಪ್ರಶಸ್ತಿ, 2012ರಲ್ಲಿ ಮೈಸೂರಿನಲ್ಲಿ ಚಾಮುಂಡೇಶ್ವರಿ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ‘ಕುಸ್ತಿಯನ್ನು ಬದುಕಿನ ಉಸಿರಾಗಿಸಿಕೊಂಡಿದ್ದೇನೆ. ಒಲಿಂಪಿಕ್ಸ್‌ನಲ್ಲಿ ಕುಸ್ತಿಯಲ್ಲಿ ಭಾರತವನ್ನು ಪ್ರತಿನಿಧಿಸಿ, ಪದಕ ಜಯಿಸುವ ಮಹದಾಸೆ ಹೊಂದಿದ್ದೇನೆ’ ಎನ್ನುತ್ತಾರೆ ಈ ಕುಸ್ತಿಪಟು.

 

- ಜೋಮನ್ ವರ್ಗೀಸ್

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು