ಹಾಸನ | ಸಾಮಾಜಿಕ ಕಾರ್ಯ
ಬಡತನದ ಹಿನ್ನೆಲೆಯಲ್ಲಿ ಬಂದ, ಹಾಸನ ಜಿಲ್ಲೆಯ ಹೆತ್ತೂರು ಹೋಬಳಿಯ ಬಾಚಿಹಳ್ಳಿ ಗ್ರಾಮದ ಪ್ರತಾಪಗೌಡ ದುಡಿಮೆಯ ಸ್ವಲ್ಪ ಭಾಗವನ್ನು ಬಡವರ ಅಭಿವೃದ್ಧಿಗೆ ವಿನಿಯೋಗಿಸುತ್ತಿದ್ದಾರೆ. ಐಟಿಐ ಶಿಕ್ಷಣ ಪಡೆದಿರುವ ಅವರು, ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕಚೇರಿ ತೆರೆದು, ದುಡಿದ ಹಣದಲ್ಲಿ ಸಕಲೇಶಪುರ ಹಾಗೂ ನೆರೆಯ ಸೋಮವಾರಪೇಟೆ ತಾಲ್ಲೂಕಿನಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ, ಅಶಕ್ತರಿಗೆ, ಸಂಘಟನೆಗಳಿಗೆ, ಕ್ರೀಡಾಕೂಟಗಳಿಗೆ, ದೇವಾಲಯಗಳಿಗೆ ಧನಸಹಾಯ ಮಾಡಿದ್ದಾರೆ.
ಹುಟ್ಟೂರಿನಲ್ಲಿ ₹26 ಲಕ್ಷ ವೆಚ್ಚದಲ್ಲಿ ದೇವಸ್ಥಾನ ಕಟ್ಟಿಸಿದ್ದಾರೆ. ಹೆತ್ತೂರು ಸಮೀಪದ ಹಳ್ಳಿಯೂರು ಗ್ರಾಮದಲ್ಲಿ ಬೆಂಕಿ ಅವಘಡದಲ್ಲಿ ಮನೆ ಕಳೆದುಕೊಂಡ ಮಹಿಳೆಯೊಬ್ಬರಿಗೆ ₹4.2 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿಕೊಟ್ಟಿದ್ದಾರೆ.
ಹಿಜ್ಜನಹಳ್ಳಿ, ಮಾಗೇರಿ, ಮಾವಿನೂರು, ಹುದಿನೂರು ಗ್ರಾಮದಲ್ಲಿ ಕಳೆದ ವರ್ಷ ಅತಿವೃಷ್ಟಿಯಿಂದ ಸಂತ್ರಸ್ತರಾದವರಿಗೆ ಆರ್ಥಿಕ ನೆರವು ಹಾಗೂ ಅವಶ್ಯಕ ವಸ್ತುಗಳನ್ನು ಪೂರೈಸಿದ್ದಾರೆ. ಆದಿಚುಂಚನಗಿರಿ ಮಠದ ಸಹಯೋಗದೊಂದಿಗೆ ಬೃಹತ್ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಿದ್ದರು. ಅಲ್ಲದೆ, ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಮಲೆನಾಡು ಸ್ನೇಹ ಸಂಘ ರಚಿಸಿಕೊಂಡು ಮಲೆನಾಡಿನ ಯುವಕರನ್ನು ಸಂಘಟಿಸಿದ್ದಾರೆ.
‘ಟೈಲರ್ ಮಗನಾಗಿ ಬಡ ಕುಟುಂಬದಲ್ಲಿ ಜನಿಸಿದ ನನಗೆ ನೋವಿನ ಅರಿವು ಇತ್ತು. ದುಡಿಮೆಯಲ್ಲಿ ಸ್ವಲ್ಪ ಹಣವನ್ನು ಸಮಾಜ ಸೇವೆಗೆ ವಿನಿಯೋಗಿಸುತ್ತಿದ್ದೇನೆ. ಮದ್ಯಪಾನ ದುಷ್ಪರಿಣಾಮ ಕುರಿತು ಜನರಿಗೆ ಜಾಗೃತಿ ಮೂಡಿಸುತ್ತಿದ್ದೇನೆ’ ಎನ್ನುತ್ತಾರೆ ಪ್ರತಾಪಗೌಡ.
- ಪವನ ಎಚ್.ಎಸ್.